ಕುಶಾಲನಗರ, ಸೆ. 6: ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್. ಅಖಿಲ ಕರ್ನಾಟಕ ಪ್ರಾಂತೀಯ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘ ಸೇರಿ ಕುಶಾಲನಗರ ನಾಡ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿತು.
ಈ ಸಂದರ್ಭ ಮಾತನಾಡಿದ ಸಂಘಟನೆಯ ಪ್ರಮುಖ ಭರತ್ ನಮ್ಮ ಹತ್ತಾರು ಬೇಡಿಕೆಗಳನ್ನು ಈಡೇರಿಸುವಂತೆ ಪ್ರಧಾನ ಮಂತ್ರಿಗಳಿಗೆ ಮನವಿಯನ್ನು ಸಲ್ಲಿಸುತ್ತಿದ್ದೇವೆ. ಕೋವಿಡ್-19ಗೆ ಒಳಪಟ್ಟಿರುವ ರೋಗಿಗಳಿಗೆ ಸರಿಯಾದ ಚಿಕಿತ್ಸೆಯನ್ನು ಸರಕಾರ ಉಚಿತವಾಗಿ ನೀಡಬೇಕು. ಕುಟುಂಬದ ಪ್ರತಿ ಸದಸ್ಯರಿಗೂ ಮಾಸಿಕ 10 ಕೆ.ಜಿ. ಉಚಿತ ಆಹಾರ ಧಾನ್ಯ ವಿತರಿಸಬೇಕು. ಭೂ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕು. ಎ.ಪಿ.ಎಂ.ಸಿ. ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾನೂನು ತಿದ್ದುಪಡಿ ಹಾಗೂ ಅಗತ್ಯ ಸೇವಾ ಸುಗ್ರೀವಾಜ್ಞೆಗಳನ್ನು ರದ್ದುಗೊಳಿಸಬೇಕು. ರಾಜ್ಯದಲ್ಲಿ ಶಾಲೆಗಳಲ್ಲಿ ದುಡಿಯುತ್ತಿರುವ ಅಕ್ಷರ ದಾಸೋಹ ಕಾರ್ಮಿಕರಿಗೆ ಕೊರೊನಾ ಕಾಲದ ಸುಮಾರು 6 ತಿಂಗಳಿನಿಂದ ಬಾಕಿ ಉಳಿದಿರುವ ವೇತನವನ್ನು ಕೂಡಲೇ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಕೃಷಿ ಕಾರ್ಮಿಕ ಮುಖಂಡರಾದ ಮುತ್ತ, ಜೋಷ್, ಪ್ರಾನ್ಸಿಸ್, ಅಂಗನವಾಡಿ ಕಾರ್ಯಕರ್ತೆ ಬಾಗೀರಥಿ, ನಾಗೇಶ್, ಶಾರದ, ಸರೋಜ, ಸಾವಿತ್ರಿ ಉಮೇಶ್, ವನಜಾಕ್ಷಿ ಮುಂತಾದವರು ಭಾಗವಹಿಸಿದ್ದರು.