ಕೂಡಿಗೆ, ಸೆ. 6: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದ ಆನೆಕೆರೆ ರಸ್ತೆಯ ಬದಿಯಲ್ಲಿ ಗೋಣಿಚೀಲದಲ್ಲಿ ತುಂಬಿಸಿಕೊಂಡು ಬಂದು ಆನೆಕೆರೆಯ ಒಂದು ಬದಿಯ ಖಾಲಿ ಇರುವ ರಸ್ತೆ ಬದಿಯ ಜಾಗಕ್ಕೆ ಕಸ ಸುರಿಯಲಾಗುತ್ತಿದೆ. ಇದರಿಂದ ಈ ರಸ್ತೆಯ ಮೂಲಕ ಹಾರಂಗಿ, ಚಿಕ್ಕತ್ತೂರು, ದೊಡ್ಡತ್ತೂರು, ಸುಂದರನಗರ ಗ್ರಾಮ ಗಳಿಗೆ ಹೋಗುವ ನೂರಾರು ಸಾರ್ವಜನಿಕರು ದುರ್ವಾಸನೆಯಿಂದಾಗಿ ಈ ರಸ್ತೆಯಲ್ಲಿ ತಿರುಗಾಡಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮ ಪಂಚಾಯತಿಗೆ ದೂರು ನೀಡಲಾಗಿದೆ.

ಕಳೆದ ಒಂದು ವಾರದಿಂದ ರಾತ್ರಿ ಸಮಯದಲ್ಲಿ ಆಟೋ ಇತರ ವಾಹನಗಳಲ್ಲಿ ತ್ಯಾಜ್ಯ ವಸ್ತುಗಳು ಸೇರಿದಂತೆ ಕೊಳೆತ ಮಾಂಸ ಮತ್ತು ಕೋಳಿ ಮತ್ತು ಆಡು ಶುಚಿಗೊಳಿಸಿದ ವಸ್ತುಗಳನ್ನು ಆನೆಕೆರೆಯ ಮುಖ್ಯ ರಸ್ತೆಯಲ್ಲಿ ತಂದು ಹಾಕಿರುವುದರಿಂದ ಈ ದಾರಿಯಲ್ಲಿ ತಿರುಗುವ ಜನರಿಗೆ ಬಾರಿ ತೊಂದರೆ ಆಗುತ್ತಿದೆ ಎಂಬ ಗ್ರಾಮಸ್ಥರ ದೂರಿನ ಮೇರೆಗೆ ಗ್ರಾಮ ಪಂಚಾಯತಿ ನೋಡಲ್ ಅಧಿಕಾರಿ ವರದರಾಜ್, ಅಭಿವೃದ್ಧಿ ಅಧಿಕಾರಿ ಆಯಿಷಾ ಸೇರಿದಂತೆ ಸಿಬ್ಬಂದಿ ವರ್ಗ ಮತ್ತು ಗ್ರಾಮಸ್ಥರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಮಾತನಾಡಿದ ನೋಡಲ್ ಅಧಿಕಾರಿ ವರದರಾಜ್, ಆನೆಕೆರೆಯ ಬದಿಯಲ್ಲಿ ಕಸ ಹಾಕಿರುವವರನ್ನು ಕಂಡುಹಿಡಿಯಲಾಗುವುದು ಅಲ್ಲದೆ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತಿ ಅನುದಾನದಲ್ಲಿ ಶಾಶ್ವತವಾದ ಕಸದ ಘಟಕ ತೆರೆಯಲು ತೀರ್ಮಾನಿಸಲಾಗಿದೆ. ಆನೆಕೆರೆಯ ಸಮೀಪದಲ್ಲಿರುವ ಗ್ರಾಮ ಪಂಚಾಯತಿ ಜಾಗದಲ್ಲಿ ಸುಸಜ್ಜಿತವಾದ ಕಸ ವಿಲೇವಾರಿ ಘಟಕವನ್ನು ಪ್ರಾರಂಭಿಸಿ ಗ್ರಾಮ ಪಂಚಾಯತಿಯ ಪೂರ್ಣ ಕಸವನ್ನು ಈ ಘಟಕದಲ್ಲಿ ಹಾಕಿ ರೋಗ ರುಜಿನಗಳು ಹರಡದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.