ಕಣಿವೆ, ಆ.6 : ಕೂಡಿಗೆ ಗ್ರಾಮ ಪಂಚಾಯಿತಿ ವತಿಯಿಂದ ಮದಲಾಪುರ ಬಳಿಯ ಬ್ಯಾಡಗೊಟ್ಟದ ಗಿರಿಜನರ ಕಾಲೋನಿ ಪ್ರದೇಶದಲ್ಲಿ ತರೆಯಲು ಉದ್ದೇಶಿಸಿರುವ ಕಸ ವಿಲೇವಾರಿ ಘಟಕ ತೆರೆಯದಂತೆ ಗಿರಿಜನ ವಾಸಿಗಳು ಭಾನುವಾರ ವ್ಯಾಪಕ ವಿರೋಧ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಎಸ್.ಎನ್.ರಾಜಾರಾವ್ ನೇತೃತ್ವದಲ್ಲಿ ಬ್ಯಾಡಗೊಟ್ಟದ ಅಂಗನವಾಡಿ ಬಳಿ ಸೇರಿ ಕಸ ವಿಲೇವಾರಿ ಘಟಕದ ಸಾಧಕ- ಬಾಧಕಗಳ ಬಗ್ಗೆ ಚರ್ಚೆ ನಡೆಸಿದ ನಿವಾಸಿಗಳು ಯಾವುದೇ ಕಾರಣಕ್ಕೂ ನಮ್ಮ ವಸತಿ ಪ್ರದೇಶದ ಆಸುಪಾಸಿನಲ್ಲಿ ಕಸ ವಿಲೇವಾರಿ ಘಟಕ ತೆರೆಯಲು ಆಸ್ಪದ ನೀಡಬಾರದು ಎಂಬ ಒಮ್ಮತದ ತೀರ್ಮಾನಕ್ಕೆ ಬಂದರು. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಾರಾವ್, ದಿಡ್ಡಳ್ಳಿಯ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಿರುವ ಬ್ಯಾಡಗೊಟ್ಟದಲ್ಲಿ ಕೂಡಿಗೆ ಪಂಚಾಯಿತಿಯವರು ಕಸ ತ್ಯಾಜ್ಯ ವಿಲೇವಾರಿ ಘಟಕ ತೆರೆಯಲು ಏಕಾ ಏಕಿ ನಿರ್ಧಾರ ಕೈಗೊಂಡು ಗಿರಿಜನರ ವಸತಿ ಪ್ರದೇಶದಲ್ಲಿ ಕಲ್ಲು ಹಾಕಿ ಘಟಕದ ಕೆಲಸ ಆರಂಭಿಸಲು ಹೊರಟಿರುವ ಕ್ರಮಕ್ಕೆ ನಿವಾಸಿಗಳ ವಿರೋಧವಿದೆ.

ಈಗಾಗಲೇ ಕುಶಾಲನಗರ ಪಟ್ಟಣದ ಕಸ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭುವನಗಿರಿ ಬಳಿ ಭೂಮಿ ಕೊಟ್ಟ ಬಳಿಕ ಅಲ್ಲಿನ ನಿವಾಸಿಗಳ ಆಕ್ರಂದನ ಹೇಳತೀರದ್ದಾಗಿದೆ. ಅದೇ ರೀತಿ ಈ ಗಿರಿಜನ ಪ್ರದೇಶ ಹಾಗೂ ಸುತ್ತಲಿನ ಶಿರಹೊಳಲು, ಸೀಗೆಹೊಸೂರು, ಮದಲಾಪುರ ಗ್ರಾಮಗಳ ನಿವಾಸಿಗಳಿಗೂ ಈ ತ್ಯಾಜ್ಯ ನಿರ್ವಹಣೆ ಘಟಕದಿಂದ ಅನಾನುಕೂಲವಾಗುತ್ತದೆ. ಪಂಚಾಯಿತಿ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಿ ಎಂದು ಹೇಳಿದ ರಾಜಾರಾವ್ ಇಲ್ಲದಿದ್ದರೆ ಬ್ಯಾಡಗೊಟ್ಟದ ನಿವಾಸಿಗಳನ್ನು ಸೇರಿಸಿ ಪ್ರತಿಭಟನೆ ನಡೆಸುವ ಎಚ್ವರಿಕೆ ನೀಡಿದರು. ಈ ಸಂದರ್ಭ ಸ್ಥಳೀಯ ಗಿರಿಜನ ಮುಖಂಡರಾದ ಅಪ್ಪು, ಮುತ್ತ, ಶಂಕರ, ಚೋಮಿ, ಮೀಸೆಮುತ್ತ, ಪಲ್ಲವಿ, ಅನಿತಾ, ಮೋಹನ್ ಮೊದಲಾದವರಿದ್ದರು.