ಮಡಿಕೇರಿ, ಸೆ. 5: ಹುದಿಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೈಸೊಡ್ಲೂರು ಗ್ರಾಮದ ಸರ್ವೆ ನಂ 181/1ಪಿ1 ರಲ್ಲಿ ಸರ್ಕಾರ ಆಶ್ರಯ ಯೋಜನೆಗೆ ಎಂಟು ಎಕರೆ ಜಮೀನನ್ನು ಮೀಸಲಿರಿಸಿದ್ದು ಅದರಲ್ಲಿ ಏಳು ಎಕರೆ ಜಾಗವನ್ನು ಖಾಸಗಿಯವರು ಕಬಳಿಸಿದ್ದು ಇದರ ವಿರುದ್ಧ ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ಮತ್ತು ಇತರ ಸಂಘಟನೆಗಳು ಆಯೋಜಿಸಿರುವ ಹೋರಾಟಕ್ಕೆ ಕೆಪಿಸಿಸಿ ಸಂಯೋಜಕ ಹೆಚ್.ಎಂ. ನಂದಕುಮಾರ್ ಬೆಂಬಲ ವ್ಯಕ್ತಪಡಿಸಿದ್ದಾರೆÀ. ಈ ಬಗ್ಗೆ ಜಿಲ್ಲಾಧಿಕಾರಿಗಳು ತನಿಖೆ ನಡೆಸಿ ನ್ಯಾಯ ಒದಗಿಸಲು ನಂದಕುಮಾರ್ ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.
* ಆದಿವಾಸಿಗಳಿಗೆ ನ್ಯಾಯ ಒದಗಿಸುವ ಸಲುವಾಗಿ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿರುವ ಹೋರಾಟಕ್ಕೆ ಕೊಡಗು ಜಿಲ್ಲಾ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಬೆಂಬಲ ನೀಡಲಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನೀರಾ ಮೈನಾ ತಿಳಿಸಿದ್ದಾರೆ.
* ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಹೈಸೊಡ್ಲೂರು ಗ್ರಾಮದ ಸರ್ವೆ ನಂ. 181ಪಿ1 ಜಾಗದಲ್ಲಿ ಜಿಲ್ಲೆಯ ಬೇರೆ ಬೇರೆ ಗ್ರಾಮ ಪಂಚಾಯಿತಿಯಿಂದ ಬಂದಿರುವ ಜನರು ಕಳೆದ 6-7 ತಿಂಗಳಿನಿಂದ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಇವರುಗಳು ಈ ಸ್ಥಳದಲ್ಲೇ ವಸತಿ ನಿರ್ಮಿಸಿ ಕೊಡಲು ಸರ್ಕಾರವನ್ನು ಒತ್ತಾಯಿಸುತ್ತಿದ್ದು, ಹೈಸೊಡ್ಲೂರು ಗ್ರಾಮದ ಪರಿಶಿಷ್ಟ ಪಂಗಡದ ಬಹಳಷ್ಟು ಜನರಿಗೆ ನಿವೇಶನ ಮತ್ತು ವಸತಿ ಇಲ್ಲದೇ ಇರುವುದರಿಂದ ಹೊರಗಿನಿಂದ ಬಂದವರನ್ನು ಕೂಡಲೇ ಈ ಸ್ಥಳದಿಂದ ತೆರವುಗೊಳಿಸಿ ಸ್ಥಳೀಯರಿಗೆ ಇಲ್ಲಿ ವಸತಿ ನಿರ್ಮಿಸಿಕೊಡಬೇಕೆಂದು ವೀರಾಜಪೇಟೆ ತಾಲೂಕು ಎರವ ಜನಾಂಗ ಒಕ್ಕೂಟದ ಮಾಜಿ ಅಧ್ಯಕ್ಷ ಪಿ.ಬಿ. ಬೆಳ್ಳಿ, ಹೈಸೊಡ್ಲೂರು ಗ್ರಾಮದ ಪ.ಪಂಗಡದ ಕಾರ್ಮಿಕರ ಸಭೆಯಲ್ಲಿ ಒತ್ತಾಯಿಸಿದ್ದಾರೆ. ಸಭೆಯಲ್ಲಿ ಬೆಟ್ಟ ಕುರುಬರ ಕಾಳ, ಪಣಿಯರವರ ಮಣಿ, ಪಣಿಯರವರ ಕರಿಯ, ಪಾಪು, ಕಿಟ್ಟ, ಕುಳಿಯ, ಕಾವೇರಿ ಹಾಜರಿದ್ದರು.
* ವೀರಾಜಪೇಟೆ ಸಮೀಪ ಹೆಗ್ಗಳ, ಬಾಳುಗೋಡು, ಬಿಟ್ಟಂಗಾಲ, ಹುದಿಕೇರಿ, ಹೈಸೊಡ್ಲೂರುಗಳಲ್ಲಿ ವಸತಿ ರಹಿತರ ನ್ಯಾಯವಾದ ಬೇಡಿಕೆಗೆ ಜಿಲ್ಲಾಧಿಕಾರಿಗಳು ಸೂಕ್ತ ಸ್ಪಂದನೆ ನೀಡುತ್ತಿಲ್ಲ ಎಂದು ಕರ್ನಾಟಕ ಪ್ರಾಂತ್ಯ ರೈತ ಮತ್ತು ಕಾರ್ಮಿಕರ ರಕ್ಷಣಾ ವೇದಿಕೆಯ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷೆ ಪಡಿಕಲ್ ಕುಸುಮಾ ಚಂದ್ರಶೇಖರ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಹುದಿಕೇರಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಸಲಿರುವ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ನೀಡುವುದಾಗಿಯೂ ವೀರಾಜಪೇಟೆ ತಾಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷರೂ ಆಗಿರುವ ಕುಸುಮಾ ಚಂದ್ರಶೇಖರ್ ತಿಳಿಸಿದ್ದಾರೆ.