ವೀರಾಜಪೇಟೆ, ಸೆ. 5: ಮನುಕುಲಕ್ಕೆ ಅಕ್ಷರ ಜ್ಞಾನವನ್ನು ನೀಡುವ ಮೂಲಕ ಶಿಕ್ಷಕರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ನೆಲ್ಲಿರ ಚಲನ್ ಹೇಳಿದರು.
ಸಂತ ಅನ್ನಮ್ಮ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಮಾಜಿ ರಾಷ್ಟ್ರಪತಿ ಡಾ ಸರ್ವಪಲ್ಲಿ ರಾಧಾಕೃಷ್ಣ ಅವರ ಕನಸು ನನಸಾಗಬೇಕಾದರೆ ಅವರು ಮಾಡಿರುವ ತ್ಯಾಗ ಮತ್ತು ಆದರ್ಶ ಗುಣಗಳನ್ನು ಎಲ್ಲರು ಪಾಲಿಸಿಕೊಂಡು ಬರಬೇಕು ಎಂದು ಹೇಳಿದರು.
ಸಂತ ಅನ್ನಮ್ಮ ದೇವಾಲಯದ ಧರ್ಮಗುರು ಫಾದರ್ ಮದಲೈಮುತ್ತು ಮಾತನಾಡಿ ಶಿಕ್ಷಕ, ಶಿಕ್ಷಕಿಯರು ಮಕ್ಕಳಿಗೆ ತಾಯಿಯ ಸ್ಥಾನದಲ್ಲಿರುವವರು. ಎಲ್ಲವನ್ನು ತ್ಯಾಗ ಮಾಡಿ ವಿದ್ಯಾರ್ಥಿಗಳ ಸಂಪೂರ್ಣ ಬೆಳವಣಿಗೆಗೆ ಕಾರಣಕರ್ತರಾಗುತ್ತಾರೆ. ಸಮಾಜ ಸದೃಢವಾಗಿ ಬೆಳೆಯಲು ಉತ್ತಮ ಹಾಗೂ ಸಂತೋಷದ ಜೀವನ ನಡೆಸಬೇಕಾದರೆ ಅದು ಶಿಕ್ಷಕರಿಂದ ಮಾತ್ರ ಸಾಧ್ಯ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲಾ ಬಿಳಗಿ ಮಾತನಾಡಿ ಶಿಕ್ಷಕರಿಗೆ ಯಾರು ಪರ್ಯಾಯ ಇಲ್ಲ. ಶಿಕ್ಷಕರ ಗೈರು ಹಾಜರಿಯನ್ನು ಊಹಿಸಲು ಸಾಧ್ಯವಿಲ್ಲ. ಕೊರೊನಾ ಇಂದು ಎಲ್ಲವನ್ನು ಕಿತ್ತುಕೊಂಡಿರಬಹುದು. ಆದರೆ ಶಿಕ್ಷಕರ ಪ್ರೀತಿ ವಿಶ್ವಾಸವನ್ನು ಕಿತ್ತುಕೊಳ್ಳಲು ಸಾಧ್ಯವಾಗಿಲ್ಲ. ಶಿಕ್ಷಕರು ತಮ್ಮ ಹುದ್ದೆಗೆ ಧಕ್ಕೆ ಬಾರದ ರೀತಿಯ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯೆ ಫಸೀಹಾ ತಬಸಮ್ ಉಪಸ್ಥಿತರಿದ್ದರು.