ಮಡಿಕೇರಿ, ಸೆ. 5: ಐಎನ್ಟಿಯುಸಿ ಸಂಘಟನೆ ನೇತೃತ್ವದಲ್ಲಿ ಇಂದು ಕೊಡಗು ಜಿಲ್ಲಾ ಪ್ರವಾಸಿ ವಾಹನಗಳ ಚಾಲಕರು ಮತ್ತು ಮಾಲೀಕರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಜಾಗತಿಕ ಕೊರೊನಾ ನಡುವೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಘೋಷಿಸಿರುವ ಆರ್ಥಿಕ ನೆರವು ತಲಾ ರೂ. 5 ಸಾವಿರ ಬಹುತೇಕ ಮಂದಿಗೆ ಕೈಸೇರಿಲ್ಲವೆಂದು ಪ್ರತಿಭಟನಾಕಾರರು ದೂರಿದರು.
ಒಂದೆಡೆ ಪೆಟ್ರೋಲ್ ಹಾಗೂ ಡಿಸೇಲ್ ದರದಲ್ಲಿ ಏರಿಕೆಯೊಂದಿಗೆ ದುಡಿಯುವ ವರ್ಗ ಸಂಕಷ್ಟ ಎದುರಿಸುತ್ತಿದ್ದರೂ ರಾಜ್ಯ ಮತ್ತು ಕೇಂದ್ರ ಸರಕಾರಗಳು ಸ್ಪಂದಿಸುತ್ತಿಲ್ಲ ಎಂಬದಾಗಿ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಸರಕಾರ ಘೋಷಿಸಿರುವ ನೆರವು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಐಎನ್ಟಿಯುಸಿ ರಾಜ್ಯ ಮುಖಂಡ ನಾಪಂಡ ಮುತ್ತಪ್ಪ, ಪದಾಧಿಕಾರಿಗಳಾದ ಗೋವಿಂದ ದಾಸ್, ಅಜ್ಜಳ್ಳಿ ರವಿ, ಕೆ. ಸಂಪತ್ ಕುಮಾರ್, ಪವನ್ ಪೆಮ್ಮಯ್ಯ, ತೆಕ್ಕಡ ಮಧು, ಎಂ. ಧನು, ಮುನೀರ್, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕೆ.ಕೆ. ಮಂಜುನಾಥ್ಕುಮಾರ್, ಗೀತಾ ಧರ್ಮಪ್ಪ ಮೊದಲಾದವರು ಪ್ರತಿಭಟನೆಗೆ ಬೆಂಬಲ ನೀಡಿದರು. ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.