ಮಡಿಕೇರಿ, ಸೆ. 5: ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಎಲ್ಲಾ ಹಬ್ಬ ಆಚರಣೆಗಳು ಕೇವಲ ಸಾಂಪ್ರದಾಯಿಕ ಆಚರಣೆಗೆ ಮಾತ್ರ ಸೀಮಿತಗೊಳ್ಳುತ್ತಿವೆ. ಅದ್ಧೂರಿ ಆಡಂಬರದೊಂದಿಗೆ ನಡೆಯುತ್ತಿದ್ದ ಹಬ್ಬಗಳೆಲ್ಲವೂ ಕೊರೊನಾದಿಂದ ಕಳೆಗುಂದಲ್ಪಟ್ಟಿವೆ.ಈ ನಡುವೆ ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವವೂ ಸಮೀಪಿಸುತ್ತಿದ್ದು, ಈ ಬಾರಿಯ ದಸರಾ ಉತ್ಸವವನ್ನು ಯಾವ ರೀತಿ ಆಚರಿಸಬೇಕು ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ದಸರಾ ಕೂಡ ಸರಳ ಆಚರಣೆಗೆ ಸೀಮಿತವಾಗಲಿದೆಯಾದರೂ, ಆಚರಣೆಯ ರೂಪು ರೇಷೆ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ.ಶಕ್ತಿ’ಯೊಂದಿಗೆ ಮಾತನಾಡಿದ ದಸರಾ ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ದಸರಾ ಆಚರಣೆ ಸಂಬಂಧ ಇದುವರೆಗೂ ಸರ್ಕಾರದಿಂದ ಯಾವುದೇ ಮಾರ್ಗಸೂಚಿ ಬಂದಿಲ್ಲ. ಮಾರ್ಗಸೂಚಿ ಬಂದ ಬಳಿಕ ದಸರಾ ಸಮಿತಿ ಸಭೆ ಕರೆಯುವ ಬಗ್ಗೆ ನಿರ್ಧರಿಸಲಾಗುವುದೆಂದು ತಿಳಿಸಿದ್ದಾರೆ.
ದಸರಾ ಸಮಿತಿ ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ ಪ್ರತಿಕ್ರಿಯಿಸಿ ದಸರಾ ಸಂಬಂಧ ದಶಮಂಟಪ ಸಮಿತಿಯ ತೀರ್ಮಾನದ ಬಗ್ಗೆ ಮಾಹಿತಿ ಪಡೆದು ನಂತರ ಜಿಲ್ಲಾಧಿಕಾರಿಗಳೊಂದಿಗೆ ಉತ್ಸವ ಸಂಬಂಧ ಚರ್ಚಿಸಲಾಗುವುದೆಂದು ಹೇಳಿದ್ದಾರೆ.