ಮಡಿಕೇರಿ, ಸೆ.5: ಜಿಲ್ಲಾ ಜಾತ್ಯತೀತ ಜನತಾದಳದ ಕಾರ್ಯಕಾರಣಿ ಸಭೆ ನಗರದ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಳ್ಳಲು ಜೆಡಿಎಸ್‍ನ ಹಿರಿಯ ರೊಬ್ಬರು ಕಾತರರಾಗಿದ್ದು, ಇತರರ ಮೇಲೂ ಒತ್ತಡ ಹೇರಿದ್ದಾರೆ ಎಂದು ಕೆಲವು ಪದಾಧಿಕಾರಿಗಳು ಚರ್ಚೆಯ ಸಂದರ್ಭ ದೂರಿಕೊಂಡರು.

ಈ ಸಂದರ್ಭ ಮಾತನಾಡಿದ ಕೆ.ಎಂ. ಗಣೇಶ್ ಯಾರೇ ಆಗಿರಲಿ, ಎರಡು ದೋಣಿಗಳಲ್ಲಿ ಕಾಲಿಟ್ಟು ಪಯಣಿಸಬಾರದು, ಜೆಡಿಎಸ್ ಅನ್ನು ತೊರೆಯುವವರು ಶೀಘ್ರ ತೊರೆಯಲಿ ಎಂದು ಹೇಳಿದರು.

ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್‍ಗೆ ಸೇರ್ಪಡೆ ಗೊಳ್ಳುತಿರುವುದಾಗಿ ನುಡಿದರು. ಪ್ರತಿ ಗ್ರಾಮ ಮಟ್ಟದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡುವುದಾಗಿ ತಿಳಿಸಿದರು.

ಪಕ್ಷದ ರಾಜ್ಯ ಉಪಾಧ್ಯಕ್ಷ ಯಾಲದಾಳು ಮನೋಜ್ ಬೋಪಯ್ಯ ಮಾತನಾಡಿ ಒಂದು ರಾಜಕೀಯ ಪಕ್ಷಕ್ಕೆ ನಾಯಕ ಮುಖ್ಯವಲ್ಲ, ಸಿದ್ಧಾಂತ ಮುಖ್ಯ. ಆದ್ದರಿಂದ ಜೆಡಿಎಸ್ ಸಿದ್ಧಾಂತಕ್ಕೆ ಬದ್ಧರಾಗಿ ಎಲ್ಲರೂ ಒಗ್ಗಟ್ಟನಿಂದ ಕಾರ್ಯ ನಿರ್ವಹಿಸಬೇಕೆಂದು ಹೇಳಿದರು. ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ್ ಮಾತನಾಡಿ ಪಕ್ಷವನ್ನು ತಳಮಟ್ಟ ದಿಂದಲೇ ಬಲಗೊಳಿಸುವ ಕಾರ್ಯ ವಾಗಬೇಕಾಗಿದ್ದು, ಜೆಡಿಎಸ್‍ಗೆ ಜಿಲ್ಲೆಯಲ್ಲಿ ಉತ್ತಮ ಭವಿಷ್ಯವಿದೆ ಎಂದರು.

ಮಹಾಪ್ರಧಾನ ಕಾರ್ಯದರ್ಶಿ ಆದಿಲ್ ಪಾಷಾ, ಯುವ ಘಟಕದ ಜಿಲ್ಲಾಧ್ಯಕ್ಷ ಸಿ.ಎಲ್. ವಿಶ್ವ, ಅಲ್ಪಸಂಖ್ಯಾತರ ಅಧ್ಯಕ್ಷ ಇಸಾಕ್ ಖಾನ್ ಮತ್ತಿತರ ಪ್ರಮುಖರು ಪಕ್ಷ ಸಂಘಟನೆಯ ಕುರಿತು ಸಲಹೆಗಳನ್ನು ನೀಡಿದರು.

ಯುವ ಘಟಕದ ಪ್ರಧಾನ ಕಾರ್ಯದರ್ಶಿ ಜಾಶಿರ್, ವೀರಾಜಪೇಟೆ ಕ್ಷೇತ್ರ ಸಮಿತಿ ಅಧ್ಯಕ್ಷ ಎಸ್.ಹೆಚ್. ಮತೀನ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ನಾಗರಾಜ್, ಮಹಿಳಾ ಘಟಕದ ಅಧ್ಯಕ್ಷೆ ಕುಸುಮಾವತಿ ಮತ್ತಿತರರು ಹಾಜರಿದ್ದರು. ಆದಿಲ್ ಪಾಷಾ ಸ್ವಾಗತಿಸಿ, ಜಾಶಿರ್ ವಂದಿಸಿದರು.