ಗೋಣಿಕೊಪ್ಪ ವರದಿ, ಸೆ. 5: ತ್ರಿಭಾಷಾ ಸಾಹಿತಿಗಳಾದ ಐಚೆಟ್ಟಿರ ಮುತ್ತಣ್ಣ ಹಾಗೂ ಬಾಚಮಾಡ ಗಣಪತಿ ಅವರ ಜನ್ಮ ಶತಮಾನೋತ್ಸವ ಪ್ರಯುಕ್ತ ಕೊಡವಾಮೆರ ಕೊಂಡಾಟ ಸಂಘಟನೆ ಆಯೋಜಿಸಿದ್ದ ಚುಟುಕು ಬರೆಯುವ ಆನ್‍ಲೈನ್ ಸ್ಪರ್ಧೆಯಲ್ಲಿ 82 ಕವಿಗಳು ಪಾಲ್ಗೊಂಡಿದ್ದರು. ಬಾದುಮಂಡ ಬೀನ ಕಾಳಯ್ಯ ಪ್ರಥಮ, ಕರವಟ್ಟಿರ ಶೃತಿಯ ಬಿದ್ದಪ್ಪ ದ್ವಿತೀಯ, ಕಾಣತಂಡ ವಿವೇಕ್ ಅಯ್ಯಪ್ಪ, ಸಣ್ಣುವಂಡ ಅಕ್ಕಮ್ಮ ಸನ್ನಿ ಹಾಗೂ ಪಳಂಗಿಯಂಡ ಶರತ್ ಬೋಪಣ್ಣ ತೃತೀಯ ಸ್ಥಾನವನ್ನು ಹಂಚಿಕೊಂಡರು. ತೀರ್ಪುಗಾರರಾಗಿ ಹಿರಿಯ ಸಾಹಿತಿ ನಾಗೇಶ್ ಕಾಲೂರು, ಕೋಟೆರ ಉದಯ್ ಪೂಣಚ್ಚ ಹಾಗೂ ಕೋಟೆರ ವಿನು ತಮ್ಮಯ್ಯ ಕಾರ್ಯ ನಿರ್ವಹಿಸಿದರು. ಬಹುಮಾನವನ್ನು ಹಿರಿಯ ತ್ರಿಭಾಷಾ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ನೀಡಿದರು. ಸಂಚಾಲಕರಾಗಿ ಸಣ್ಣುವಂಡ ಕಿಸುದೇವಯ್ಯ ಕಾರ್ಯ ನಿರ್ವಹಿಸಿದರು. ಈ ಬಗ್ಗೆ ಮಾಹಿತಿ ನೀಡಿರುವ ಕೊಡವಾಮೆರ ಕೊಂಡಾಟ ಕೂಟದ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ, ತ್ರಿಭಾಷಾ ಸಾಹಿತಿಗಳಾದ ಜನ್ಮ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ತಿಂಗಳಿಗೊಂದು ಸಾಹಿತ್ಯ ಸ್ಪರ್ಧೆ ನಡೆಯುತ್ತಿದೆ. ಇದರಂತೆ ಮೂರನೇ ಭಾಗವಾಗಿ ಕೊಡವ ಭಾಷೆ ಚುಟುಕು ರಚನಾ ಸ್ಪರ್ಧೆ ನಡೆಸಲಾಗಿದೆ. ಜಾತಿ ಧರ್ಮದ ಹಂಗಿಲ್ಲದೆ ಮುಕ್ತವಾಗಿ ಕವಿಗಳು ಭಾಗವಹಿಸಿದ್ದಾರೆ ಎಂದು ತಿಳಿಸಿದ್ದಾರೆ.