ಸೋಮವಾರಪೇಟೆ, ಸೆ. 4: ಮದ್ಯಪಾನಿಗಳ ಮೋಜಿನಿಂದಾಗಿ ಗಬ್ಬೆದ್ದು ಹೋಗಿದ್ದ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮಕ್ಕಳಗುಡಿ ಬೆಟ್ಟದ ವೀಕ್ಷಣಾಗೋಪುರ ಸುತ್ತಮುತ್ತಲ ಪ್ರದೇಶವನ್ನು ಗ್ರಾಮಸ್ಥರು ಶ್ರಮದಾನ ನಡೆಸಿ ಸ್ವಚ್ಛಗೊಳಿಸಿದರು.

ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಕಿರಗಂದೂರು ಗ್ರಾಮದ ಮಕ್ಕಳ ಗುಡಿ ಬೆಟ್ಟದಲ್ಲಿ ಗ್ರಾಮಸ್ಥರು ಶ್ರಮದಾನದ ಮೂಲಕ ಸ್ವಚ್ಛತೆಗೊಳಿಸಿ, ಗಿಡ ನೆಟ್ಟು ವನಮಹೋತ್ಸವ ಆಚರಿಸಿದರು. ಪ್ರಕೃತಿ ವೀಕ್ಷಣೆಯ ನೆಪದಲ್ಲಿ ಬರುವ ಮದ್ಯವ್ಯಸನಿಗಳು, ಮದ್ಯಸೇವಿಸಿ ಖಾಲಿ ಬಾಟಲ್‍ಗಳು ಹಾಗು ಪ್ಲಾಸ್ಟಿಕ್ ಬ್ಯಾಗ್‍ಗಳನ್ನು ಅಲ್ಲಲ್ಲಿ ಎಸೆದಿದ್ದ ಪರಿಣಾಮ ಇಡೀ ವಾತಾವರಣ ಅಶುಚಿತ್ವದಿಂದ ಕೂಡಿತ್ತು. ನೀರಿನ ಟ್ಯಾಂಕ್‍ನೊಳಗೂ ಬಿಯರ್ ಬಾಟಲ್‍ಗಳನ್ನು ಎಸೆಯಲಾಗಿತ್ತು.

ಕಿರಗಂದೂರು ಗ್ರಾಮ ಪಂಚಾಯಿತಿಗೆ ದೂರು ನೀಡಿದರೂ ಕ್ರಮಕೈಗೊಳ್ಳದಿದ್ದಾಗ, ಗ್ರಾಮದ ಯುವಕರು ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳುವದರೊಂದಿಗೆ, ಬೆಟ್ಟದ ಸುತ್ತಮುತ್ತವಿರುವ ಖಾಲಿ ಜಾಗದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟರು. ಮಕ್ಕಳಗುಡಿ ಬೆಟ್ಟಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಬೇಕು. ಬೆಟ್ಟದ ಮೇಲೆ ಮೋಜು ಮಸ್ತಿ ಮಾಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಪಂಚಾಯಿತಿಯ ಅಧಿಕಾರಿಗಳು ಮುಂದಾಗಬೇಕೆಂದು ಶ್ರಮದಾನದ ನೇತೃತ್ವ ವಹಿಸಿದ್ದ ಕಿರಗಂದೂರು ಗೌತಮ್ ಹೇಳಿದರು. ಗ್ರಾಮಸ್ಥರಾದ ರಾಜ್‍ಕುಮಾರ್, ಕಾರ್ತಿಕ್, ಗಣೇಶ್, ಪೊನ್ನಪ್ಪ, ರಶಿನ್, ಭರತ್, ರೋಶನ್, ಪ್ರಸನ್ನ, ದೀಪಕ್, ವಿನೋದ್, ಹರೀಶ್, ಅಭಿ ಮತ್ತಿತರರು ಶ್ರಮದಾನದಲ್ಲಿ ಭಾಗವಹಿಸಿದ್ದರು.