ಮಡಿಕೇರಿ, ಸೆ. 4: ಕೊಡಗು ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಸಂಬಂಧ ವೈದ್ಯಕೀಯ ವಿಜ್ಞಾನ ಕಾಲೇಜು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೂ ಸೇರಿದಂತೆ; ಸಂಬಂಧಿಸಿದ ರೋಗಿಗಳ ತಪಾಸಣೆಯೊಂದಿಗೆ ಚಿಕಿತ್ಸೆ ಮೂಲಕ ಯಾವದೇ ರೀತಿಯಲ್ಲಿ ಹಣ ಲೂಟಿಗೆ ಅವಕಾಶವಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ, ಇಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮೋಹನ್, ವೈದ್ಯಕೀಯ ವಿಜ್ಞಾನ ಕಾಲೇಜಿನ ಮುಖ್ಯಸ್ಥ ಡಾ. ಕೆ.ಎ. ಕಾರ್ಯಪ್ಪ ಹಾಗೂ ಕೋವಿಡ್ -19 ಜಿಲ್ಲಾಸ್ಪತ್ರೆಯ ತಜ್ಞ ವೈದ್ಯ ಡಾ. ಲೋಕೇಶ್ ಅವರುಗಳು ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಹೇಳಿಕೆ ನೀಡಿದರು.ಕೊಡಗು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಸ್ಪಷ್ಟನೆ ನೀಡುತ್ತಿರು ವದಾಗಿ ನುಡಿದ ಅಧಿಕಾರಿಗಳು, ಕೊರೊನಾ ಸೋಂಕಿತರ ಮತ್ತು ಶಂಕಿತರ ತಪಾಸಣೆ ಉಚಿತವಾಗಿಯೇ ನಡೆಸಲಾಗುತ್ತಿದೆ ಎಂದು ವಿವರಿಸಿ ದರು. ಕೋವಿಡ್ -19 ಸೋಂಕಿತರಿಗೆ ವೈದ್ಯಕೀಯ ಚಿಕಿತ್ಸೆ ಹಾಗೂ ಆ ಕಾರಣದಿಂದ ಮೃತರಾಗಿರುವ ವ್ಯಕ್ತಿಗಳ ಅಂತ್ಯ ಸಂಸ್ಕಾರ ಸೇರಿದಂತೆ, ಬೇಕಾಗುವ ಎಲ್ಲಾ ಸಲಕರಣೆಗಳು ಒಳಗೊಂಡ ‘ಕಿಟ್’ ಸರಕಾರದಿಂದ ಉಚಿತವಾಗಿ ಸರಬರಾಜುಗೊಳ್ಳುತ್ತಿದ್ದು, ಯಾವದೇ ಕೊರತೆ ಇಲ್ಲವೆಂದು ಮಾಹಿತಿ ನೀಡಿದರು.

ಊಟಕ್ಕೆ ಶುಲ್ಕ : ಆಸ್ಪತ್ರೆಗಳಲ್ಲಿ ಅಥವಾ ಸಾಮೂಹಿಕ ಕೊರೊನಾ ನಿಯಂತ್ರಣ ಕೇಂದ್ರಗಳಲ್ಲಿ ದಾಖಲಾಗುವ ಮಂದಿಗೆ; ಊಟದ ಶುಲ್ಕ ದಿನವೊಂದಕ್ಕೆ ಎಲ್ಲಾ ಖರ್ಚು ಸೇರಿ ರೂ. 250 ಮೊತ್ತ ಸರಕಾರದ ಮಾರ್ಗಸೂಚಿಯಂತೆ ನಿಗಧಿಯಾಗಿದೆ. ಜಿಲ್ಲೆಯ ಮಟ್ಟಿಗೆ ತಾವು ಕೇವಲ ರೂ. 170 ಮೊತ್ತಕ್ಕೆ ಈ ಖರ್ಚು ಭರಿಸುತ್ತಿರುವದಾಗಿ ಸ್ಪಷ್ಟಪಡಿಸಿದರು.

ಗೃಹ ಸಂಪರ್ಕ ತಡೆ ಕಡ್ಡಾಯ : ಅನೇಕ ಮಂದಿಯನ್ನು ಕೊರೊನಾ ಸೋಂಕು ಸಂಬಂಧ ತಪಾಸಣೆಗೆ ಒಳಪಡಿಸಿ,

(ಮೊದಲ ಪುಟದಿಂದ) 14 ದಿನಗಳ ತನಕ ‘ಹೋಂ ಐಸೋಲೇಸನ್’ ಇರುವಂತೆ ಸೂಚಿಸಿ ಮನೆಗೆ ಕಳುಹಿಸಲಾಗುತ್ತದೆ. ಇಂತಹವರು ವಾಸ್ತವ ಮುಚ್ಚಿಟ್ಟು ಸಾರ್ವಜನಿಕವಾಗಿ ಕಾಣಿಸಿ ಕೊಳ್ಳುತ್ತಿದ್ದು, ಈ ಬಗ್ಗೆ ಗ್ರಾ.ಪಂ. ಹಂತದಲ್ಲಿ ನಿಗಾ ವಹಿಸಲಾಗುತ್ತಿದೆ ಎಂದು ಆರೋಗ್ಯಾಧಿಕಾರಿ ಪ್ರತಿಕ್ರಿಯಿಸಿ ದರು.

ಸೋಂಕಿಗೆ ಕಾಲ ಮಿತಿ : ಮಡಿಕೇರಿಯ ರಾಜಕೀಯ ಮುಖಂಡ ರೊಬ್ಬರಿಗೆ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕು ಪತ್ತೆಯೊಂದಿಗೆ, ಮೈಸೂರಿನ ಆಸ್ಪತ್ರೆಯೊಂದರಲ್ಲಿ ಪರೀಕ್ಷಿಸಲಾಗಿ ‘ನೆಗೆಟಿವ್’ ಕಂಡು ಬಂದಿರುವ ಅಂಶ ಪ್ರಶ್ನಿಸಿದಾಗ, ಆರೆಂಟು ದಿನಗಳಲ್ಲಿ ಕೊರೊನಾ ಸೋಂಕುವಿನಲ್ಲಿ ವ್ಯತ್ಯಾಸದೊಂದಿಗೆ, ಗುಣಮುಖರಾಗುವ ಸಂಭವ ಸಹಜವೆಂದು ಪ್ರತಿಪಾದಿಸಿದರು.

ನಿರ್ಲಕ್ಷ್ಯ ಬೇಡ : ಪ್ರಸ್ತುತ ಅಂತಾರ್ರಾಷ್ಟ್ರೀಯ ಪ್ರವಾಸಿಗಳಿಗೆ ಮಾತ್ರ ಸೋಂಕಿನ ತಪಾಸಣೆ ಮಾಡಲಾಗುತ್ತಿದ್ದು, ಉಳಿದವರು ಯಾರೇ ಆಗಿದ್ದರೂ ಶೀತ, ನೆಗಡಿ, ತಲೆನೋವು ಇನ್ನಿತರ ಸೋಂಕಿನ ಲಕ್ಷಣ ಕಂಡುಬಂದರೆ, ನಿರ್ಲಕ್ಷ್ಯ ಮಾಡದೆ ನೇರವಾಗಿ ವೈದ್ಯಕೀಯ ತಪಾಸಣೆಗೆ ಒಳಗಾಗುವಂತೆ ಸಲಹೆ ನೀಡಿದರು. ಶಾರೀರಿಕವಾಗಿ ದೃಢಕಾಯರಿದ್ದರೆ ಕೊರೊನಾ ಸೋಂಕು ಅಷ್ಟಾಗಿ ಪರಿಣಾಮ ಬೀರದು, ದುರ್ಬಲ ಶರೀರ ಅಥವಾ ವೃದ್ಧರಾಗಿದ್ದು, ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ತಕ್ಷಣ ಚಿಕಿತ್ಸೆ ಪಡೆಯುವದು ಅನಿವಾರ್ಯ ಎಂದರು.

ಆ್ಯಂಬುಲೆನ್ಸ್ ಸೇವೆ : ಕೊರೊನಾದಿಂದ ಮೃತರಾದರೆ ಜಿಲ್ಲೆಯೊಳಗೆ ‘ಶ್ರದ್ಧಾಂಜಲಿ ವಾಹನ’ದಲ್ಲಿ ಮೃತರ ಊರಿಗೆ ಕೊಂಡೊಯ್ಯಲು ವ್ಯವಸ್ಥೆ ಕಲ್ಪಿಸಿದ್ದು, ಜಿಲ್ಲೆಯಿಂದ ಹೊರಗೆ ಕೂಡ ಬೇರೆ ಆ್ಯಂಬುಲೆನ್ಸ್‍ನಲ್ಲಿ ಕೇವಲ ಡೀಸೆಲ್ ವೆಚ್ಚದೊಂದಿಗೆ ಸೇವೆ ಒದಗಿಸ ಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.