ಸಿದ್ದಾಪುರ, ಸೆ. 4: ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಗೆ ತೆರಳಿದ ಅರಣ್ಯ ಸಿಬ್ಬಂದಿಗಳ ಮೇಲೆ ಕಾಡಾನೆ ದಾಳಿ ನಡೆಸಲು ಮುಂದಾಗಿದ್ದು, ದಾಳಿಯನ್ನು ತಪ್ಪಿಸಿಕೊಳ್ಳಲು ಯತ್ನಿಸಿದ ಸಿಬ್ಬಂದಿಗಳು ಜಾರಿಬಿದ್ದು, ಗಾಯಗೊಂಡಿರುವ ಘಟನೆ ನೆಲ್ಯಹುದಿಕೇರಿಯಲ್ಲಿ ನಡೆದಿದೆ.
ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಅಭ್ಯತ್‍ಮಂಗಲ, ನೆಲ್ಯಹುದಿಕೇರಿ, ಬೆಟ್ಟದಕಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿದ್ದು, ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟು ದಾಂಧಲೆ ನಡೆಸುತ್ತಿದ್ದವು. ಕೃಷಿ ಫಸಲುಗಳನ್ನು ಧ್ವಂಸಗೊಳಿಸಿ ಹಾನಿಗೊಳಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಇಂದು ಕುಶಾಲನಗರ ಉಪ ವಲಯ ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ ನೇತೃತ್ವದಲ್ಲಿ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ 25ಕ್ಕೂ ಅಧಿಕ ಕಾಡಾನೆಗಳನ್ನು ಕಾರ್ಯಾಚರಣೆ ನಡೆಸುವ ಮೂಲಕ ಅರಣ್ಯಕ್ಕೆ ಅಟ್ಟಲು ಪ್ರಯತ್ನಿಸಿದರು.
ಅರಣ್ಯ ಸಿಬ್ಬಂದಿಗಳು ಪಟಾಕಿ ಸಿಡಿಸಿ ಆನೆಗಳನ್ನು ಓಡಿಸಲು ಮುಂದಾದರು. ಈ ಸಂದರ್ಭದಲ್ಲಿ ಕಾಡಾನೆಗಳ ಹಿಂಡಿನ ಪೈಕಿ ಹೆಣ್ಣಾನೆಯೊಂದು ರೋಷಗೊಂಡು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅರಣ್ಯ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಗಳನ್ನು ಬೆನ್ನಟ್ಟಿದೆ. ಕಾಡಾನೆಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಸಿಬ್ಬಂದಿಗಳು ಎದ್ದು ಬಿದ್ದು ಓಡಿದರು. ಕಾಲು ಜಾರಿ ಎರಡು ಮಂದಿ ಅರಣ್ಯ ಸಿಬ್ಬಂದಿಗಳು ಗಾಯಗೊಂಡಿದ್ದು, ಕೂದಲೆಳೆ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆದರೂ ಕೂಡ ಛಲ ಬಿಡದ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೆಸರಿನ ನಡುವೆ ಕಾಫಿ ತೋಟದ ಒಳಗೆ ಶ್ರಮಪಟ್ಟು ಕಾಡನೆಗಳನ್ನು ಅರಣ್ಯಕ್ಕೆ ಅಟ್ಟಲು ಪ್ರಯತ್ನಿಸಿದರು. ಕಾರ್ಯಾಚರಣೆ ಸಂದರ್ಭದಲ್ಲಿ ಕಾಡಾನೆಗಳು ಕಾಫಿ ತೋಟಗಳಿಂದ ಅರಣ್ಯಕ್ಕೆ ತೆರಳಲು ಹಿಂದೇಟು ಹಾಕುತ್ತಾ ಸುತ್ತಾಡಿಸಿದವು. ಆದರೂ ಕಾರ್ಯಾಚರಣೆಯನ್ನು ಮುಂದುವರೆಸಿ ಕೊನೆಗೂ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ 25ಕ್ಕೂ ಅಧಿಕ ಕಾಡಾನೆಗಳನ್ನು ದುಬಾರೆ ಅರಣ್ಯಕ್ಕೆ ಕಾವೇರಿ ನದಿಯ ಮೂಲಕ ಅಟ್ಟುವಲ್ಲಿ ಯಶಸ್ವಿಯಾದರು. ಕಾರ್ಯಾಚರಣೆ ಸಂದರ್ಭದಲ್ಲಿ 5 ಮರಿ ಆನೆಗಳು ಸೇರಿದಂತೆ 25ಕ್ಕೂ ಅಧಿಕ ಕಾಡಾನೆಗಳು ಕಂಡು ಬಂದವು ಎಂದು ಅರಣ್ಯ ಸಿಬ್ಬಂದಿಗಳು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಎ.ಸಿ.ಎಫ್ ನೆಹರೂ ಹಾಗೂ ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್ ಮಾರ್ಗದರ್ಶನದಲ್ಲಿ ಉಪ ವಲಯಾರಣ್ಯಾದಿಕಾರಿ ಮಹದೇವ್ ನಾಯಕ್, ಕನ್ನಂಡ ರಂಜನ್, ಚರಣ್ ಕುಮಾರ್, ರವಿ ಉತ್ನಾಲ್ ಸೇರಿದಂತೆ ಆರ್.ಆರ್.ಟಿ ತಂಡದ ಸಿಬ್ಬಂದಿಗಳು ಸೇರಿ ಒಟ್ಟು 35 ಮಂದಿ ಪಾಲ್ಗೊಂಡಿದ್ದರು. -ವರದಿ: ವಾಸು ಎ.ಎನ್.