ಕಣಿವೆ, ಸೆ. 4 : ಬಸವನಹಳ್ಳಿ ಗಿರಿಜನ ವಿವಿಧೋದ್ದೇಶ ಸಹಕಾರ ಸಂಘದ ವ್ಯಾಪ್ತಿಯಲ್ಲಿ ಬರುವ ಬೆಟ್ಟಕುರುಬ ಪರಿವಾರದವರಿಗೆ ಜಿಲ್ಲಾಡಳಿತ ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿರುವ ಗಿರಿಜನ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ. ಚಂದ್ರು, ಕೊಡಗು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಇದುವರೆಗೂ ಈ ಬೆಟ್ಟಕುರುಬ ಜನಾಂಗವನ್ನು ಕಡೆಗಣಿಸಿದ್ದಾರೆ.

ಬೆಟ್ಟ ಕುರುಬ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ಕೂಡ ನೀಡದ ಕಾರಣ ಈ ಸಮುದಾಯದ ಮಕ್ಕಳು ವಿದ್ಯಾಭ್ಯಾಸ ಹಾಗೂ ಉದ್ಯೋಗದ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಸೂಕ್ತ ನಿರ್ದೇಶನ ನೀಡುವ ಮೂಲಕ ಬೆಟ್ಟಕುರುಬ ಸಮುದಾಯದ ನೆರವಿಗೆ ಧಾವಿಸಬೇಕು. ಈ ಮಂದಿಗೆ ಅಗತ್ಯವಿರುವ ವಾಸದ ಮನೆಗಳನ್ನು ಕಟ್ಟಿ ಕೊಡಬೇಕು. ಕುಡಿಯುವ ನೀರು, ರಸ್ತೆ ಹಾಗೂ ವಿದ್ಯುತ್ ಸೌಲಭ್ಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.

ಬಸವನಹಳ್ಳಿ, ನಂಜರಾಯಪಟ್ಟಣ ಹಾಡಿಗಳು ಸೇರಿದಂತೆ ವಿವಿಧ ಹಾಡಿಗಳಲ್ಲಿ ವಾಸವಿರುವ ಬೆಟ್ಟಕುರುಬ ಜನಾಂಗ ಅಗತ್ಯ ಸೌಲಭ್ಯಗಳಿಂದ ವಂಚಿತಗೊಂಡಿವೆ. ಸಂಬಂಧಿಸಿದ ಗ್ರಾಮ ಪಂಚಾಯಿತಿಗಳು ಕೂಡ ಅನುದಾನದ ಶೇ.25 ರಷ್ಟು ಹಣವನ್ನು ಈ ಸಮುದಾಯಕ್ಕೆ ವಿನಿಯೋಗಿಸಬೇಕೆಂದು ಚಂದ್ರು ಆಗ್ರಹಿಸಿದ್ದಾರೆ.

- ಕೆ.ಎಸ್. ಮೂರ್ತಿ