ನಾಪೆÇೀಕ್ಲು, ಸೆ. 1: ರೈತರ ಬಾಕಿ ಸಾಲಮನ್ನಾ ಯೋಜನೆಯಡಿ ಕೊಡಗು ಜಿಲ್ಲೆಗೆ ಬಿಡುಗಡೆಗೆ ಬಾಕಿ ಇರುವ ಹಣ ಹಾಗೂ 2017ರ ಸಾಲಿನ ರೂ. 50000 ಸಾಲ ಮನ್ನಾದ ಹಣವನ್ನು ಬಿಡುಗಡೆ ಮಾಡುವಂತೆ ಸಹಕಾರ ಸಚಿವ ಎಸ್.ಡಿ. ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಅವರ ನೇತೃತ್ವದಲ್ಲಿ ಶಾಸಕ ಕೆ.ಜಿ.ಬೋಪಯ್ಯ ಅವರ ಮೂಲಕ ಸಚಿವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ ನಿಯೋಗ ರೈತರ ಬಾಕಿ ಸಾಲ ಮನ್ನಾ ಹಾಗೂ 2017ರ ತಲಾ 10000 ರೂ. ಸಾಲ ಮನ್ನಾದ ಹಣವನ್ನು ಬಿಡುಗಡೆ ಮಾಡುವಂತೆ ಕೋರಲಾಯಿತು. ಈ ಸಂದರ್ಭ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಹುದ್ದೆ ಖಾಲಿ ಇದ್ದು ಇದಕ್ಕೆ ಖಾಯಂ ಅಧಿಕಾರಿಯನ್ನು ನೇಮಿಸಬೇಕೆಂದು ಮನವಿಮಾಡಲಾಯಿತು. ನಿಯೋಗದ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ. ನಿಯೋಗದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ನಿರ್ದೇಶಕರಾದ ಹೊಟ್ಟೆಂಗಡ ರಮೇಶ್, ಪಟ್ರಪಂಡ ರಘುನಾಣಯ್ಯ, ಮತ್ತಿತರರು ಇದ್ದರು. - ದುಗ್ಗಳ