ವೀರಾಜಪೇಟೆ, ಸೆ. 1: ಅರ್ಧ ಶತಮಾನಕ್ಕೂ ಅಧಿಕ ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದ ಗೌರಿ ಗಣೇಶನ ಪ್ರತಿಷ್ಠಾಪನೆ ವಿಸರ್ಜನೋತ್ಸವವು ಈ ಬಾರಿ ಕೋವಿಡ್-19 ಅಡಚಣೆಯಾದ ಹಿನ್ನೆಲೆಯಲ್ಲಿ ಸರಳವಾಗಿ, ಆಡಂಬರ ರಹಿತವಾಗಿ ಸಾಮೂಹಿಕ ಮೆರವಣಿಗೆ ಇಲ್ಲದೆ ಹನ್ನೊಂದು ದಿನಗಳ ತನಕ ಪೂಜಿಸಿದ ಇಲ್ಲಿನ ನಾಲ್ಕು ದೇವಾಲಯಗಳ ಉತ್ಸವ ಸಮಿತಿಗಳು ಅಪರಾಹ್ನ 4-30 ಗಂಟೆಯಿಂದ ರಾತ್ರಿ 7 ಗಂಟೆಯೊಳಗಿನ ಅವಧಿಯಲ್ಲಿ ಸರದಿಯಂತೆ ಸಾಂಪ್ರದಾಯಿಕ ಬದ್ಧವಾಗಿ ಗೌರಿ ಗಣೇಶನ ಮೂರ್ತಿಗಳನ್ನು ವಿಸರ್ಜಿಸಿದವು.

ಅಪರಾಹ್ನದ ಕೊನೆಯ ಮಹಾಪೂಜಾ ಸೇವೆ ಮುಕ್ತಾಯಗೊಂಡ ತಕ್ಷಣ ಮೂರು ದೇವಾಲಯಗಳು ಗಣೇಶನ ಮೂರ್ತಿಯನ್ನು ಸಂಪ್ರದಾಯದಂತೆ ಗೌರಿಕೆರೆಗೆ ಕೊಂಡೊಯ್ಯಲು ಅಣಿಯಾದರು. ಜೈನರಬೀದಿಯಲ್ಲಿರುವ ಬಸವೇಶ್ವರ ದೇವಾಲಯದಲ್ಲಿ ಮಾತ್ರ ಗೌರಿ ಗಣೇಶನ ಎರಡು ಮೂರ್ತಿಗಳ ವಿಸರ್ಜನೆಗೆ ಸಿದ್ಧತೆ ನಡೆಸಿ ಸರಳವಾಗಿ ಅಲಂಕಾರಗೊಂಡಿದ್ದ ಗೂಡ್ಸ್ ವಾಹನದಲ್ಲಿ ಗೌರಿಕೆರೆ ಕಡೆಗೆ ತೆರಳಿತು.

ಸಂಜೆ 5-30ರ ಗಂಟೆ ಹೊತ್ತಿಗೆ ಗೌರಿ ಕೆರೆಗೆ ಬಂದ ಇಲ್ಲಿನ ಗಡಿಯಾರ ಕಂಬದ ಬಳಿಯಿರುವ ಗಣಪತಿ ಸೇವಾ ಟ್ರಸ್ಟ್‍ನ ಗಣಪತಿ ಮೂರ್ತಿಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಮೊದಲನೇ ಪಂಕ್ತಿಯಲ್ಲಿ ಸರದಿಯಂತೆ ಪೂಜೆ ಸಲ್ಲಿಸಿ ಶಾಸ್ತ್ರೊಕ್ತವಾಗಿ ಗೌರಿಕೆರೆಯಲ್ಲಿ ವಿಸರ್ಜಿಸಲಾಯಿತು. ಸರದಿ ಪ್ರಕಾರ ಎರಡನೇ ಪಂಕ್ತಿಯಲ್ಲಿದ್ದ ಬಸವೇಶ್ವರ ದೇವಾಲಯದ ಗೌರಿ ಗಣೇಶೋತ್ಸವ ಸಮಿತಿಯ ಗೌರಿ ಗಣೇಶನ ಎರಡು ಮೂರ್ತಿಗಳನ್ನು ಪೂಜೆಯೊಂದಿಗೆ ವಿಸರ್ಜಿಸಲಾಯಿತು. ಇದರ ಹಿಂದೆ ಇದ್ದ ಇಲ್ಲಿನ ಛತ್ರಕೆರೆಯ ಆಂಜನೇಯ ದೇವಾಲಯದ ಜಲದರ್ಶಿನಿ ಗಣೇಶ ಉತ್ಸವ ಸಮಿತಿಯಿಂದ ಗಣೇಶನ ಮೂರ್ತಿಯನ್ನು ವಿಸರ್ಜಿಸಲಾಯಿತು. ನಂತರ ರಾತ್ರಿ 7 ಗಂಟೆಯ ಸಮಯದಲ್ಲಿ ಇಲ್ಲಿನ ಅಪ್ಪಯ್ಯ ಸ್ವಾಮಿರಸ್ತೆಯ ಬಾಲಾಂಜನೇಯ ವಿನಾಯಕ ಉತ್ಸವ ಸಮಿತಿಯ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.

ಮೊದಲನೇ ದಿನ 9 ಉತ್ಸವ ಸಮಿತಿಗಳು, ಮೂರನೇ ದಿನ 8 ಉತ್ಸವ ಸಮಿತಿಗಳು ಕೊನೆಯ 11 ದಿನ ಪೂಜಿಸಿದ 4 ಉತ್ಸವ ಸಮಿತಿಗಳು ವಿಸರ್ಜನೆಯೊಂದಿಗೆ ಈ ಬಾರಿಯ ಇತಿಹಾಸ ಪ್ರಸಿದ್ಧ ಗೌರಿ ಗಣೇಶೋತ್ಸವಕ್ಕೆ ವಿದಾಯ ಹೇಳಲಾಯಿತು.