ಕುಶಾಲನಗರ, ಸೆ. 1: ಸೋಮವಾರಪೇಟೆ ತಾಲೂಕು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಜಿಲ್ಲಾ ಸಮಿತಿಯ ಸಭೆ ಕುಶಾಲನಗರದಲ್ಲಿ ನಡೆಯಿತು. ಸ್ಥಳೀಯ ಕೆಎಂಟಿ ವಿದ್ಯಾಸಂಸ್ಥೆ ಆವರಣದಲ್ಲಿ ಸಮಿತಿಯ ಅಧ್ಯಕ್ಷ ಎಂ.ಟಿ. ದಾಮೋದರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆರ್‍ಟಿಇ ಹಣದ ಮರುಪಾವತಿಗೆ ಸಂಬಂಧಪಟ್ಟಂತೆ ಕೆಲವು ಶಾಲೆಗಳಿಗೆ ಲಕ್ಷಾಂತರ ರೂಪಾಯಿಗಳನ್ನು ಕಡಿತಗೊಳಿಸಿರುವ ಬಗ್ಗೆ, ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಶಾಲೆಯಿಂದ ವಾಹನಗಳನ್ನು ಒದಗಿಸಿದ ಸಂದರ್ಭ ಬಿಡುಗಡೆಗೊಳಿಸಬೇಕಾದ ಹಣದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಶಾಲೆಗಳ ಶಿಕ್ಷಕರನ್ನು ಇಲಾಖೆ ಅಧಿಕಾರಿಗಳು ಪದೇಪದೇ ಸಭೆ ಕರೆಯುವ ಮೂಲಕ ಅನವಶ್ಯಕ ಕಿರುಕುಳ ನೀಡುತ್ತಿರುವ ಬಗ್ಗೆ ಸಭೆಯ ಗಮನಕ್ಕೆ ತರಲಾಯಿತು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿಯ ಅಧ್ಯಕ್ಷ ಎಂ.ಟಿ. ದಾಮೋದರ್, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.
ಕಾರ್ಯದರ್ಶಿ ಸುಜಲಾದೇವಿ ಮಾತನಾಡಿ, ಎಲ್ಲಾ ಶಾಲೆಗಳು ಕಳೆದ ಬಾರಿಯಷ್ಟೆ ಶುಲ್ಕ ಸಂಗ್ರಹಿಸಲಾಗುತ್ತಿದ್ದು, ಈ ಬಾರಿ ಪೋಷಕರು ಶುಲ್ಕ ಭರಿಸಲು ಹಿಂದೇಟು ಹಾಕುತ್ತಿದ್ದಾರೆ ಸರ್ಕಾರ ಇದುವರೆಗೆ ಯಾವುದೇ ರೀತಿಯ ಅನುದಾನ ಕಲ್ಪಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಇದರಿಂದ ಸಂಸ್ಥೆಗಳ ನಿರ್ವಹಣೆ ಶಿಕ್ಷಕರ ವೇತನ ನೀಡಲು ಸಂಕಷ್ಟ ಉಂಟಾಗಿದೆ ಎಂದರು.
ಈ ಸಂದರ್ಭ ಉಪಾಧ್ಯಕ್ಷರಾದ ಪೊನ್ನಚ್ಚನ ಮೋಹನ್, ನಿರ್ದೇಶಕರು ಗಳಾದ ಸುಬ್ರಮಣ್ಯ, ಮಣಿ, ಮಹಮ್ಮದ್, ಉಮಾ ಪ್ರಭಾಕರ್, ರವಿ, ನಂದಕುಮಾರ್, ಪ್ರದೀಪ್, ಮುದ್ದಪ್ಪ, ಬೋಪಣ್ಣ ಮತ್ತಿತರರು ಇದ್ದರು.