ಕಣಿವೆ, ಸೆ. 1: ಕಣಿವೆ ಗ್ರಾಮದಿಂದ ಸೀಗೆಹೊಸೂರು ಗ್ರಾಮದ ಮೂಲಕ ಸೋಮವಾರಪೇಟೆ ಸಂಪರ್ಕ ಕಲ್ಪಿಸುವ ರಸ್ತೆ ಸೀಗೆಹೊಸೂರು ಗ್ರಾಮ ವ್ಯಾಪ್ತಿಯಲ್ಲಿ ಸಂಪೂರ್ಣ ಹಾಳಾಗಿದ್ದು ಕೂಡಲೇ ಸರಿಪಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸೀಗೆಹೊಸೂರು ಗ್ರಾಮದ ಸುಮಾರು ಎರಡರಿಂದ ಮೂರು ಕಿಮೀ ಗಳಷ್ಟು ಅಂತರದಲ್ಲಿನ ರಸ್ತೆ ರಸ್ತೆಯಾಗಿ ಉಳಿದಿಲ್ಲ.

ಈ ರಸ್ತೆ ಯಲ್ಲಿ ದಿನಂಪ್ರತಿ ಹೊಸಳ್ಳಿ ಕಲ್ಲುಕ್ವಾರಿಗಳಿಂದ ಕಲ್ಲನ್ನು ತುಂಬಿದ ನೂರಾರು ಲಾರಿಗಳು ಓಡಾಡುವುದ ರಿಂದ ರಸ್ತೆ ಪೂರ್ಣ ಹಾಳಾಗಿದೆ. ಅಲ್ಲಲ್ಲಿ ಉದ್ದಕ್ಕೂ ಹಳ್ಳಬಿದ್ದು ದ್ವಿಚಕ್ರ ಸವಾರರ ಸಂಚಾರಕ್ಕೆ ಸಂಚಕಾರ ವಾಗುತ್ತಿದೆ. ಪಾದಚಾರಿ ಗಳು ಕೂಡ ತೆರಳಲು ಸಾಧ್ಯ ವಾಗದಷ್ಟು ರಸ್ತೆ ಹಾಳಾಗಿದೆ.

ಇಲ್ಲಿ ಬಿಸಿಲಾದರೆ ನಿತ್ಯವೂ ಧೂಳುಮಯವಾಗುವ ರಸ್ತೆ, ಮಳೆ ಯಾದರೆ ಕೆಸರು ಮಯವಾಗುತ್ತದೆ. ರಸ್ತೆಯಂಚಿನ ಮನೆಗಳ ಒಳಗಿನ ಸ್ಥಿತಿಯಂತೂ ಹೇಳ ತೀರದು ಎನ್ನುವ ಇಲ್ಲಿನ ನಿವಾಸಿ ಲಕ್ಷ್ಮಿ ಹಾಗೂ ರುಕ್ಮಿಣಿ, ನಮಗೆ ಜಿಲ್ಲಾಧಿಕಾರಿಗಳು ಕೂಡಲೇ ಸ್ಪಂದಿಸಬೇಕು. ಮನೆಯೊಳಗಿನ ಬಟ್ಟೆ, ಬರೆ, ಪಾತ್ರೆ ಎಲ್ಲವೂ ಧೂಳುಮಯವಾಗುತ್ತಿವೆ. ಮನೆಯಲ್ಲಿ ಇರುವ ಮಕ್ಕಳು ಹಾಗೂ ವೃದ್ಧರ ಸ್ಥಿತಿಯನ್ನಂತೂ ಹೇಳತೀರದ್ದು, ಧೂಳು ಕುಡಿದು ಅಸ್ತಮಾದಂತಹ ರೋಗಗಳು ಕಾಣಿಸತೊಡಗಿವೆ ಎಂದು ಆಪಾದಿಸಿದ್ದಾರೆ.

ಹಗಲಿಡೀ ರಸ್ತೆಯಲ್ಲಿ ಲಾರಿಗಳ ಕಾಟವಾದರೆ, ರಾತ್ರಿಯಿಡೀ ಗ್ರಾಮದಲ್ಲಿ ಕಾಡಾನೆಗಳ ಕಾಟ; ನಮ್ಮ ನೆಮ್ಮದಿ ನುಚ್ಚುನೂರು ಮಾಡಿವೆ ಎನ್ನುತ್ತಾರೆ ಗ್ರಾಮದ ಕಾವೇರಪ್ಪ ಈ ಬಗ್ಗೆ ಸ್ಥಳೀಯ ನಿವಾಸಿಯೂ ಆದ ಉದ್ಯಮಿ ವಿ.ಎಂ. ವಿಜಯ್ ಅವರು ಪ್ರತಿಕ್ರಿಯಿಸಿ, ಕ್ರಷರ್‍ಗಳಿಂದ ಲಾರಿಗಳು ಸರಾಗವಾಗಿ ಸಂಚರಿಸಬೇಕೆಂಬ ಕಾರಣದಿಂದ ಸ್ವಂತ ಹಣ ವ್ಯಯಿಸಿ ಉಂಟಾಗಿರುವ ರಸ್ತೆಯ ಹಳ್ಳಗಳನ್ನು ಆಗಿಂದಾಗ್ಗೆ ಮುಚ್ಚುತ್ತಿದ್ದೇವೆ. ಆದರೂ ಏನೂ ಪ್ರಯೋಜನ ವಾಗುತ್ತಿಲ್ಲ.

ಇಲ್ಲಿ ಸರ್ವ ಋತುವಿನ ರಸ್ತೆಯನ್ನು ಮಾಡದ ಹೊರತು ರಸ್ತೆ ಸುಸ್ಥಿತಿ ಸಾಧ್ಯವೇ ಇಲ್ಲ. ಈ ಬಗ್ಗೆ ಗ್ರಾಮಸ್ಥರಾದ ನಾವುಗಳು ಇಲ್ಲಿನ ಶಾಸಕರು ಹಾಗೂ ಮುಖ್ಯಮಂತ್ರಿ ಗಳಿಗೂ ಮನವಿ ಸಲ್ಲಿಸಿದ್ದೇವೆ. ಕಳೆದ ಹತ್ತು ವರ್ಷಗಳಿಂದಲೂ ಈ ರಸ್ತೆ ಮಾತ್ರ ಸುಧಾರಣೆ ಕಾಣುತ್ತಿಲ್ಲ. ಕಾಡಾನೆಗಳ ನಿತ್ಯ ಸಂಚಾರದ ಈ ಮಾರ್ಗದಲ್ಲಿ ಕೂಡಲೇ ಸುವ್ಯವಸ್ಥಿತ ರಸ್ತೆ ನಿರ್ಮಾಣ ಆಗಬೇಕಿದೆ ಎಂದು ವಿಜಯ್ ಒತ್ತಾಯಿಸಿದ್ದಾರೆ. -ಮೂರ್ತಿ