ಕುಶಾಲನಗರ, ಸೆ. 1: ಕಳೆದ ಕೆಲವು ತಿಂಗಳಿನಿಂದ ಸ್ಥಗಿತಗೊಂಡಿದ್ದ ಕುಶಾಲನಗರದ ವಾರದ ಸಂತೆಯನ್ನು ಮಂಗಳವಾರ ಕೆಲವು ವ್ಯಾಪಾರಿಗಳು ಜಿಲ್ಲಾಡಳಿತದ ಆದೇಶ ಇಲ್ಲದಿದ್ದರೂ ಪ್ರಾರಂಭಿಸಿದ್ದು ಕಂಡುಬಂತು. ವ್ಯಾಪಾರ ವಹಿವಾಟು ಇಲ್ಲದೆ ಸಂಕಷ್ಟದಲ್ಲಿದ್ದ ವರ್ತಕರು ಬೆಳಗ್ಗಿನಿಂದ ಸಂತೆ ಪ್ರಾರಂಭಿಸಿದ್ದು ಗೋಚರಿಸಿತು. ಗ್ರಾಹಕರ ಕೊರತೆ ನಡುವೆ ಸ್ವಲ್ಪ ಕಾಲ ಸಂತೆ ನಡೆದು ನಂತರ ದಿಢೀರನೆ ಸುರಿದ ಮಳೆಯಿಂದ ಗೊಂದಲ ಉಂಟಾಯಿತು. ಈ ನಡುವೆ ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರು ಪ್ರತಿಕ್ರಿಯಿಸಿ, ಮಾರುಕಟ್ಟೆ ರಸ್ತೆಯಲ್ಲಿ ಸಂತೆ ಪ್ರಾರಂಭಿಸಲು ಅನುಮತಿ ಇರುವುದಿಲ್ಲ. ಮುಂದಿನ ವಾರದಿಂದ ಆರ್‍ಎಂಸಿ ಆವರಣದಲ್ಲಿ ಸಂತೆ ಪ್ರಾರಂಭಿಸಲು ಕ್ರಮಕೈಗೊಳ್ಳಲಾಗು ವುದು ಎಂದು ತಿಳಿಸಿದ್ದಾರೆ.

ಸಂಕಷ್ಟದಲ್ಲಿರುವ ವ್ಯಾಪಾರಿಗಳ ಸಮಸ್ಯೆಗಳನ್ನು ಅರಿತು ಮಾರುಕಟ್ಟೆ ಆವರಣದಲ್ಲಿ ದಿಢೀರನೆ ಪ್ರಾರಂಭಿಸಿರುವ ವರ್ತಕರ ಮೇಲೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಪಪಂ ಮುಖ್ಯಾಧಿಕಾರಿ ಸುಜಯ್‍ಕುಮಾರ್ ತಿಳಿಸಿದ್ದಾರೆ.