ಕೂಡಿಗೆ, ಸೆ. 1: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ಚೋಳನ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು.
ತಾಲೂಕು ತಹಶೀಲ್ದಾರ್ ಗೋವಿಂದರಾಜು ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಒತ್ತುವರಿ ಪ್ರದೇಶದ ಸರ್ವೆ ಕಾರ್ಯ ಮಾಡಲಾಯಿತು. ಸರ್ವೆ ನಂ. 10 ರಲ್ಲಿ 4.13 ಎಕರೆ ಪ್ರದೇಶದಲ್ಲಿರುವ ಚೋಳನಕೆರೆಯ 75 ಸೆಂಟ್ ಜಾಗವನ್ನು ಸ್ಥಳೀಯ ರೈತರು ಒತ್ತುವರಿ ಮಾಡಿಕೊಂಡಿರುವುದು ಕಂಡುಬಂದ ಹಿನ್ನಲೆ ಜೆಸಿಬಿ ಬಳಸಿ ಒತ್ತುವರಿ ಪ್ರದೇಶದಲ್ಲಿ ಟ್ರ್ರೆಂಚ್ ನಿರ್ಮಿಸಿ ಗಡಿ ಗುರುತು ಮಾಡಿ ಪಂಚಾಯ್ತಿ ಸುಪರ್ದಿಗೆ ವಹಿಸಲಾಯಿತು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ತಹಶೀಲ್ದಾರ್ ಗೋವಿಂದರಾಜು, ತಾಲೂಕು ಇಒ ಅವರ ಆದೇಶದಂತೆ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ. ತಾಲೂಕಿನಾದ್ಯಂತ ವಿವಿಧೆಡೆಗಳಲ್ಲಿ 39 ಕೆರೆಗಳ ಜಾಗ ಒತ್ತುವರಿಯಾಗಿದ್ದು ಇದನ್ನು ತೆರವುಗೊಳಿಸಿ ಆಯಾ ಪಂಚಾಯ್ತಿಗಳ ಅಧೀನಕ್ಕೆ ಒಳಪಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಕಂದಾಯಾಧಿಕಾರಿ ಮಧುಸೂದನ್, ಕೂಡುಮಂಗಳೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಆಯಿಷಾ ಸೇರಿದಂತೆ ಸರ್ವೆ ಅಧಿಕಾರಿಗಳು ಇದ್ದರು.