ವೀರಾಜಪೇಟೆ, ಆ. 31: ಅರ್ಧ ಶತಮಾನಕ್ಕೂ ಅಧಿಕ ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದ ಇತಿಹಾಸ ಪ್ರಸಿದ್ಧ ಗೌರಿ ಗಣೇಶನ ಉತ್ಸವ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ವಿಸರ್ಜನೋತ್ಸವವನ್ನು ಈ ಬಾರಿ ಕೋವಿಡ್-19 ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲು ನಿರ್ಧರಿಸಿದಂತೆ ಅನಂತಪದ್ಮನಾಭ ವೃತದ ದಿನವಾದ ಇಂದು 21 ಉತ್ಸವ ಸಮಿತಿಗಳ ಪೈಕಿ ವಿಸರ್ಜನೋತ್ಸವಕ್ಕೆ ಉಳಿದುಕೊಂಡಿದ್ದ ಇಲ್ಲಿನ ಗಣಪತಿ ದೇವಾಲಯದ ಗಣಪತಿ ಸೇವಾ ಟ್ರಸ್ಟ್, ಛತ್ರಕೆರೆ ಬಳಿಯ ಆಂಜನೇಯ ದೇವಾಲಯದ ಗಣೇಶ ಉತ್ಸವ ಸಮಿತಿ, ಇಲ್ಲಿನ ಜೈನರ ಬೀದಿಯ ಬಸವೇಶ್ವರ ದೇವಾಲಯದ ಗೌರಿಗಣೇಶ ಉತ್ಸವ ಸಮಿತಿ ಹಾಗೂ ಅಪ್ಪಯ್ಯ ಸ್ವಾಮಿ ರಸ್ತೆಯ ಬಾಲಾಂಜನೇಯ ವಿನಾಯಕ ಉತ್ಸವ ಸಮಿತಿಗಳು ತಾ. 1 ರಂದು (ಇಂದು) ಮೂರ್ತಿಗಳ ವಿಸರ್ಜನೋತ್ಸವಕ್ಕೆ ಸಿದ್ಧತೆ ನಡೆಸಿವೆ.

ಆಗಸ್ಟ್ 22 ರಂದು ಪದ್ಧತಿಯಂತೆ ಒಟ್ಟು 21 ಉತ್ಸವ ಸಮಿತಿಗಳು ಒಟ್ಟಿಗೆ ಗೌರಿಗಣೇಶನನ್ನು ಪ್ರತಿಷ್ಠಾಪಿಸಿ ಅಂದು ರಾತ್ರಿ 9 ಉತ್ಸವ ಸಮಿತಿಗಳು ಮೊದಲನೇ ದಿನಕ್ಕೆ ಮೂರ್ತಿಗಳನ್ನು ವಿಸರ್ಜಿಸಿದರೆ ಮೂರನೇ ದಿನಕ್ಕೆ 8 ಉತ್ಸವ ಸಮಿತಿಗಳು ಮೂರ್ತಿಗಳನ್ನು ಸರಳವಾಗಿ ಇಲ್ಲಿನ ಗೌರಿ ಕೆರೆಯಲ್ಲಿ ವಿಸರ್ಜಿಸಿದವು.

ಈಗ ಉಳಿದ 4 ಉತ್ಸವ ಸಮಿತಿಗಳು 11ದಿನಗಳ ಕಾಲ ಗೌರಿ ಗಣೇಶನಿಗೆ ಪೂಜೆ ಸಲ್ಲಿಸಿದ್ದು ತಾ. 1 ರಂದು ಅಪರಾಹ್ನ 3 ಗಂಟೆಯಿಂದ 6.30ರ ಸಮಯದಲ್ಲಿ ಇಲ್ಲಿನ ಖಾಸಗಿ ಬಸ್ಸು ನಿಲ್ದಾಣದ ಬಳಿಯಿರುವ ಗೌರಿಕೆರೆಯಲ್ಲಿ ಮೂರ್ತಿಗಳ ವಿಸರ್ಜನೋತ್ಸವ ನಡೆಸಲಿವೆ.

ಸರಕಾರದ ಮಾರ್ಗಸೂಚಿ ಪ್ರಕಾರ ಗೌರಿ ಗಣೇಶೋತ್ಸವದ ವಿಸರ್ಜನೋತ್ಸವದ ಸಾಮೂಹಿಕ ಮೆರವಣಿಗೆಯನ್ನು ನಿಷೇಧಿಸಿರು ವುದರಿಂದ ಷರತ್ತಿಗೊಳಪಟ್ಟು ಕೊರೊನಾ ವೈರಸ್ ನಿರ್ಬಂಧದಡಿ ಯಲ್ಲಿ ವಿಸರ್ಜನೋತ್ಸವಕ್ಕೆ 4 ಉತ್ಸವ ಸಮಿತಿಗಳು ಅಣಿಯಾಗಿವೆ.

ಈ ಬಾರಿಯ ಗೌರಿಗಣೇಶ ವಿಸರ್ಜನೋತ್ಸವ ಆಡಂಬರ, ಸದ್ದುಗದ್ದಲವಿಲ್ಲದೆ ವಾದ್ಯಗೋಷ್ಠಿ ಇಲ್ಲದೆ ಪ್ರತಿಷ್ಠಾಪನೆ ಹಾಗೂ ವಿಸರ್ಜನೋತ್ಸವ ಜರುಗಿರುವುದು ವಿಶೇಷವೆನಿಸಿದೆ.