ಶ್ರೀಮಂಗಲ, ಆ. 31 : ಶ್ರೀಮಂಗಲ ಪಟ್ಟಣದಲ್ಲಿ ಸಾರ್ವಜನಿಕರು ಮತ್ತು ವರ್ತಕರು ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸುತ್ತಾ ಯಾವುದೇ ಆತಂಕವಿಲ್ಲದೆ ಎಂದಿನಂತೆ ತಮ್ಮ ವ್ಯಾಪಾರ ವಹಿವಾಟು ಕೆಲಸ ಕಾರ್ಯವನ್ನು ಮುಂದುವರಿಸುವಂತೆ ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಾಣೀರ ಮುತ್ತಪ್ಪ ಹೇಳಿದ್ದಾರೆ.
ಶ್ರೀಮಂಗಲ ಗ್ರಾ.ಪಂ. ಸಭಾಂಗಣದಲ್ಲಿ ಚೇಂಬರ್ ಆಫ್ ಕಾಮರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಾರ್ಚ್ 15 ರಿಂದ ಕೋವಿಡ್ 19 ಸೋಂಕು ಹರಡುವಿಕೆ ತಡೆಗಟ್ಟಲು ಮುನ್ನೆಚ್ಚರಿಕೆಯಾಗಿ ಸರ್ಕಾರ ಮತ್ತು ಜಿಲ್ಲಾಡಳಿತ ನೀಡಿದ್ದ ಮಾರ್ಗಸೂಚಿಯನ್ನು ಶ್ರೀಮಂಗಲದಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ಪಾಲಿಸುತ್ತಾ ಬರಲಾಗಿದೆ. ಇದರ ನಡುವೆ ಆಗಸ್ಟ್ 7 ರಂದು ಮತ್ತು 10 ರಂದು ಪಟ್ಟಣದ ಒಂದೊಂದು ಕುಟುಂಬಕ್ಕೆ ಕೋವಿಡ್-19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಯಿಂದ ಪಟ್ಟಣವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ ಎಂದು ವಿವರಿಸಿದರು.
ಸೋಂಕು ತಗುಲಿದ ಕುಟುಂಬಗಳಿಗೆ ಪ್ರಾಥಮಿಕ ಹಂತದಲ್ಲೇ ಆರೋಗ್ಯ ಇಲಾಖೆ ಚಿಕಿತ್ಸೆ ನೀಡಿದ್ದರಿಂದ 3 ರಿಂದ 7 ದಿನಗಳ ಒಳಗೆ ಎಲ್ಲರೂ ಸಂಪೂರ್ಣರಾಗಿ ಗುಣಮುಖರಾಗಿದ್ದು, ನಂತರದಲ್ಲಿ ನಡೆಸಿದ ಕೋವಿಡ್ 19 ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ. ಹೀಗಿರುವಾಗ ಪಟ್ಟಣಕ್ಕೆ ಸಾರ್ವಜನಿಕರು ಆತಂಕದಿಂದ ಮತ್ತು ತಪ್ಪು ಮಾಹಿತಿಯಿಂದ ಆಗಮಿಸದೆ ಇರಬಾರದು ಎಂದಿನಂತೆ ವರ್ತಕರು ಹಾಗೂ ಸಾರ್ವಜನಿಕರು ವ್ಯಾಪಾರ ವಹಿವಾಟು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಅವರು ಹೇಳಿದರು.
ಸಭೆಯಲ್ಲಿ ಚೇಂಬರ್ ಆಫ್ ಕಾಮರ್ಸ್ನ ಉಪಾಧ್ಯಕ್ಷ ಬೊಳ್ಳ್ಳಾಜಿರ ಅಶೋಕ್, ಕಾರ್ಯದರ್ಶಿ ಚೋನೀರ ಕಾಳಯ್ಯ, ಸದಸ್ಯ ಕಾಳಿಮಾಡ ತಮ್ಮು ಮುತ್ತಣ್ಣ, ಮಾಜಿ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ಹಾಜರಿದ್ದರು.