ವೀರಾಜಪೇಟೆ, ಆ. 30: ಎಲ್ಲರೂ ಒಂದೇ ಸಮಾನತೆಯ ಜೀವನ ಸಾಗಿಸಬೇಕು ಎಂಬುದು ತಮ್ಮ ತಂದೆಯ ಉದ್ದೇಶವಾಗಿತ್ತು. ಅವರ ಜ್ಞಾಪಕಾರ್ಥ ತಾನು ಮತ್ತು ಸಹೋದರ ಮಾಜಿ ಎಂ.ಎಲ್.ಸಿ ಎ.ಕೆ. ಸುಬ್ಬಯ್ಯ, ಪೊನ್ನಮ್ಮನ ಹೆಸರಿನಲ್ಲಿ ದತ್ತಿ ನಿಧಿಯನ್ನು ಪ್ರಾರಂಭಿಸಿ ಬಡವರು ಹಾಗೂ ಶೋಷಿತ ವರ್ಗದವರಿಗೆ ಸಹಾಯ ಮಾಡಲಾಗುತ್ತಿದೆ ಎಂದು ರಾಜ್ಯ ಹೈಕೋರ್ಟ್ ವಕೀಲ ಎ.ಎಸ್ ಪೊನ್ನಣ್ಣ ಹೇಳಿದರು.
ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೆಟ್ಟ ಪ್ರದೇಶದ ಅರಸು ನಗರ, ಅಯ್ಯಪ್ಪಬೆಟ್ಟಗಳಲ್ಲಿ ಪಡಿತರ ಆಹಾರ ಕಿಟ್ ವಿರತಣೆ ಮಾಡಿ ಮಾತನಾಡಿದ ಅವರು ಕೋವಿಡ್-19 ಸಂದರ್ಭ ಅನೇಕ ಕೈಗಾರಿಕೆ ಉದ್ಯಮಗಳು ಸ್ತಬ್ಧಗೊಂಡ ಹಿನ್ನೆಲೆಯಲ್ಲಿ ಬಡವರಿಗೆ ಕೂಲಿ ಕಾರ್ಮಿಕರಿಗೆ ಜೀವನ ನಡೆಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿರುವುದರಿಂದ ಸಂಸ್ಥೆಯ ವತಿಯಿಂದ ಒಂದು ತಿಂಗಳಿಗಾಗುವಷ್ಟು ಪಡಿತರ ಆಹಾರ ಕಿಟ್ ನೀಡಲಾಗುತ್ತಿದೆ. ಎಂದರು.
ಮಾಜಿ ಎಂಎಲ್ಸಿ ಅರುಣ್ ಮಾಚಯ್ಯ ಮಾತನಾಡಿ ಬಿಜೆಪಿ ಪಕ್ಷ ಬಡ ಜನರು ಎಷ್ಟೇ ಸಂಕಷ್ಟದಲ್ಲಿದ್ದರೂ ತಿರುಗಿ ನೋಡಿಲ್ಲ. ಕೊರೊನಾ ಲಾಕ್ಡೌನ್ ಸಂದರ್ಭ ಬಡಜನರು, ಕಾರ್ಮಿಕರುಗಳು, ಕೆಲಸ ಇಲ್ಲದೆ ಇದ್ದಾಗ ಕಾಫಿ ಬೆಳೆಗಾರರು ತೋಟದಲ್ಲಿ ಕೆಲಸ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಅವರ ಕೂಗಿಗೆ ಸ್ಪಂದಿಸಿದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಕದ್ದಣಿಯಂಡ ಹರೀಶ್ ಬೋಪಣ್ಣ ಮಾತನಾಡಿ ಜೀವನಾಧಾರಕ್ಕೆ ಎಲ್ಲಿ ಹೋದರೂ ನಾವು ಹುಟ್ಟಿದ ಮಣ್ಣನ್ನು ಮರೆಯಲು ಸಾಧ್ಯವಿಲ್ಲ. ಈ ಮಣ್ಣಿನಲ್ಲಿ ಒಳ್ಳೆಯ ಕೆಲಸ ಮಾಡುವವರಿಗೆ ಸಹಕಾರ ನೀಡಬೇಕು ಎಂದು ಹೇಳಿದರು. ವೇದಿಕೆಯಲ್ಲಿ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಸೋನಿಯಾ ಬ್ರಿಗೇಡ್ ಜಿಲ್ಲಾಧ್ಯಕ್ಷ ಜಾನ್ಸ್ನ್, ಪರಿಶಿಷ್ಟ ಜಾತಿ ಜಿಲ್ಲಾಧ್ಯಕ್ಷ ವಿ.ಕೆ. ಸತೀಶ್, ವೀರಾಜಪೇಟೆ ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ಪೊನ್ನಕ್ಕಿ ಉಪಸ್ಥಿತರಿದ್ದರು.