ಗೋಣಿಕೊಪ್ಪವರದಿ, ಆ. 30 : ಭತ್ತ ಬೆಳೆಯತ್ತ ಮತ್ತೆ ಯುವ ಸಮೂಹದಲ್ಲಿ ಆಸಕ್ತಿ ಮೂಡಿಸಲು ಕೊಡಗು ಜಾವ ಯೆಜ್ಡಿ ಮೋಟಾರ್ ಸೈಕಲ್ ಕ್ಲಬ್ ಮತ್ತು ರೂಟ್ಸ್ ಆಫ್ ಕೊಡಗು ಸಂಘಟನೆಯ ವತಿಯಿಂದ ರೂಪಿಸಿರುವ ಬೇಲ್‍ಪಣಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಕಿಗ್ಗಾಲು ಗ್ರಾಮದ ಪುದಿಯೊಕ್ಕಡ ಸೂರಜ್ ಬೋಜಣ್ಣ ಅವರ ಗದ್ದೆಯಲ್ಲಿ ಪ್ರಾಯೋಗಿಕವಾಗಿ ನಡೆದ ಬೇಲ್ ಪಣಿ ಕಾರ್ಯದಲ್ಲಿ ಸುಮಾರು 60 ಕ್ಕೂ ಹೆಚ್ಚು ಯುವಕ-ಯುವತಿಯರು ಪಾಲ್ಗೊಂಡು ನಾಟಿ ಮಾಡಿ ಸಂಭ್ರಮ ಪಟ್ಟರು. ಗದ್ದೆ ಉಳುಮೆ ನಂತರ ಸಂಪೂರ್ಣವಾಗಿ ಕೊಯ್ಲುವರೆಗೂ ಯುವಕರಿಂದಲೇ ನಡೆಯುತ್ತಿರುವ ಬೇಲ್‍ಪಣಿ ಯುವ ಸಮೂಹಕ್ಕೆ ಮಾದರಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಗದ್ದೆಗಳು ಕಾಡು ಪಾಲಾಗುತ್ತಿರುವುದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಿ ಯುವ ಸಮೂಹವೊಂದು ಗದ್ದೆಯಲ್ಲಿ ಭತ್ತ ನಾಟಿ ಮಾಡಿ ಯುವ ಪೀಳಿಗೆಗೆ ಸ್ಪೂರ್ತಿಯಾಗುತ್ತಿದ್ದಾರೆ. ನಶಿಸಿ ಹೋಗುತ್ತಿರುವ ಕೃಷಿ ಪದ್ದತಿಗೆ ಒಲವು ತೋರಿದ ಯುವಕರು, ಗದ್ದೆಯಲ್ಲಿ ನಡೆಯುತ್ತಿದ್ದ ಜಲ ಸಂರಕ್ಷಣೆಗೆ ಕಾಳಜಿ ತೋರಿದ್ದಾರೆ. ಕೊರೊನಾ ನಿಯಂತ್ರಣಕ್ಕಾಗಿ 55 ರಿಂದ 60 ಯುವಕ-ಯುವತಿಯರು ಮಾತ್ರ ನಾಟಿ ಮಾಡಿದರು.
ಯುವಕ ಯುವತಿಯರು ಉಯ್ಯ ಪಾಟ್ ಹಾಡುತ್ತಾ ನಾಟಿ ಕೆಲಸ ಪೂರ್ಣಗೊಳಿಸಿದರು. ಬೆಂಗಳೂರು ಕೊಡವ ಸಮಾಜ ಯೂತ್ ಕೌನ್ಸಿಲ್, ಕನೆಕ್ಟಿಂಗ್ ಕೊಡವಾಸ್ ಸಂಘಟನೆ ಹಾಗೂ ಪುದಿಯೊಕ್ಕಡ ಕುಟುಂಬಸ್ಥರು ಕೂಡ ಭಾಗಿಯಾಗಿದ್ದರು. ಕಳೆದ 3 ವರ್ಷಗಳಿಂದ ಪ್ರವಾಹದಿಂದಾಗಿ ಕೊಡಗು ಜಿಲ್ಲೆಯಲ್ಲಿ ಕೆಸರು ಗದ್ದೆ ಕ್ರೀಡಾಕೂಟ ನಡೆಯದ ಕಾರಣ ಬೇಲ್‍ಪಣಿ ಯೋಜನೆ ಹೆಚ್ಚು ಮಹತ್ವ ಪಡೆದುಕೊಂಡಿದೆ.
ಕೊಡವ ಸಂಸ್ಕøತಿಯಲ್ಲಿ ಭತ್ತದ ಕೃಷಿಗೆ ಅತ್ಯಂತ ಮಹತ್ವವಿದ್ದು, ಭತ್ತದ ಕೃಷಿ ಮತ್ತು ಕೊಡವ ಸಂಸ್ಕøತಿಯ ನಡುವೆ ಅವಿನಾಭಾವ ಸಂಬಂಧವಿದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಭತ್ತದ ಕೃಷಿಯ ಬಗ್ಗೆ ನಿರ್ಲಕ್ಷ ತೋರುತ್ತಿರುವುದರಿಂದ ಯುವ ಪೀಳಿಗೆಗೆ ಕೃಷಿ ಸಂಸ್ಕøತಿ ನಶಿಸುತ್ತಿದೆ. ಕೊಡಗಿನ ಎಡಮ್ಯಾರ್ ಒಂದ್, ಕೈಲ್‍ಪೊಳ್ದ್, ಕಾವೇರಿ ಚಂಗ್ರಾಂದಿ, ಪುತ್ತರಿ ನಮ್ಮೆಯ ಮೂಲ ಭತ್ತ ಕೃಷಿಯಾಗಿರುವುದರಿಂದ ಹಬ್ಬದ ಉಳಿವಿಗೂ ಇದರಿಂದ ಸಹಕಾರಿ ಯಾಗಲಿದೆ ಎಂಬ ಅಭಿಪ್ರಾಯ ಯುವ ಸಮೂಹದಲ್ಲಿದೆ. ನಾಟಿಯಲ್ಲಿ ಹಾಡುತ್ತಿದ್ದ ‘ಉಯ್ಯ ಪಾಟ್’ ಕೂಡ ಕಡೆಗಣಿಸಲ್ಪಟ್ಟಿದೆ. ಕೂಡು ಕುಟುಂಬಗಳನ್ನು ಮತ್ತಷ್ಟು ಒಂದಾಗಿಸುತ್ತಿದ್ದ ಭತ್ತ ನಾಟಿಯನ್ನು ಎಲ್ಲಾ ಗ್ರಾಮದಲ್ಲಿ ನಡೆಸಲು ಯೋಜನೆ ರೂಪಿಸಿಕೊಳ್ಳಲಾಗಿದೆ.
ಕಾವೇರಿ ಮಾತೆ ಹೆಸರಿನಲ್ಲಿ ಭೂಮಿಯಲ್ಲಿ ಭತ್ತ ಕೃಷಿಗೆ ಮುಂದಾಗಿರುವ ಯುವ ಸಮೂಹ, ಕಾವೇರಮ್ಮೆರ ಮಣ್ಣ್‍ಲ್ ಬೇಲ್ ನಡ್ಕನಾ.. ಬೆಳೆ ಬಂದ ಅಕ್ಕಿಲ್ ಕೆಲ ತುಂಬಾ ಕೂಳ್ ಉಂಗನಾ (ಕಾವೇರಿ ತಾಯಿ ಮಣ್ಣಿನಲ್ಲಿ ಭತ್ತ ಬೆಳೆದು, ಹೊಟ್ಟೆ ತುಂಬಾ ಊಟ ಮಾಡುವ) ಎಂಬ ಸ್ಲೋಗನ್ ಮೂಲಕ ಬೇಲ್‍ಪಣಿ ನಡೆಸಿದರು. ಪುದಿಯೊಕ್ಕಡ ಸೂರಜ್ ಬೋಜಣ್ಣ ಅವರು ಸುಮಾರು 2 ಎಕರೆ ಗದ್ದೆಯನ್ನು ನಾಟಿಗೆ ನೀಡಿ ಪ್ರೋತ್ಸಾಹ ನೀಡಿದರು.
ಕೆ.ಎಸ್.ವೈ.ಸಿ ಸಂಘಟನೆ ಸಂಚಾಲಕ ಚೋಕಂಡ ಸೂರಜ್, ಕೆಜೆವೈಎಂಸಿ ಸಂಚಾಲಕ ನಂದಿನೆರವಂಡ ಪ್ರವೀಣ್, ಅಚ್ಚಾಂಡಿರ ಕುಶಾಲಪ್ಪ, ಮಲ್ಲೇಂಗಡ ಸೋಮಣ್ಣ, ಚಿರಿಯಪಂಡ ಅಶ್ವಿನ್, ಪಾಲೇಂಗಡ ಅಮಿತ್, ಮಂದನೆರವಂಡ ಅನುಪ್, ಶಾಂತೆಯಂಡ ನಿರನ್, ಪಾಡೆಯಂಡ ದೇವಯ್ಯ, ಪಾಲೇಯಡ ಕೃಪನ್ ಇದ್ದರು.
ಭತ್ತದ ನಾಟಿಯ ಮೂಲಕ ಸಂಸ್ಕøತಿಯ ಜತೆಗೆ ಪರಿಸರ ಸಂರಕ್ಷಣೆಯನ್ನೂ ಕೂಡಾ ಮಾಡಬಹುದಾಗಿದೆ. ಕೊಡಗಿನ ನೆಲ ಜಲದ ಸಂರಕ್ಷಣೆಯ ಕಾರ್ಯವೂ ಇದರ ಮೂಲಕ ಆಗುತ್ತಿದೆ. ಮುಂದಿನ ವರ್ಷಗಳಲ್ಲಿ ವಿವಿಧ ಗ್ರಾಮಗಳಿಗೆ ವಿಸ್ತರಿಸುವ ಚಿಂತನೆ ಇದೆ ಎಂದು ರೂಟ್ಸ್ ಆಫ್ ಕೊಡಗು ಸಂಘಟನೆ ಸಂಚಾಲಕ ಚೇಂದಂಡ ಶಮ್ಮಿ ಮಾದಯ್ಯ ತಿಳಿಸಿದ್ದಾರೆ.
-ಸುದ್ದಿಪುತ್ರ