ಸುಂಟಿಕೊಪ್ಪ, ಆ. 30: ಸೂರ್ಲಬ್ಬಿ ಗರ್ವಾಲೆ ಮಂಕ್ಯ, ಚಿತ್ತರಳ್ಳಿ, ಶಿರಂಗಳ್ಳಿ, ಕಿರುದಾಳೆ ಹಾಗೂ ಮೂವತ್ತೋಕ್ಲು ಗ್ರಾಮಕ್ಕೆ ಸಂಚರಿಸುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದ್ದರಿಂದ ಗ್ರಾಮಸ್ಥರಿಗೆ ತೊಂದರೆಯಾಗಿದ್ದು, ಮತ್ತೆ ಬಸ್ ಸಂಚಾರವನ್ನು ಪುನರಾರಂಭಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮಡಿಕೇರಿಯಿಂದ ಮಾದಾಪುರ ಮಾರ್ಗವಾಗಿ ಸೂರ್ಲಬ್ಬಿಗೆ ಹಾಗೂ ಮಡಿಕೇರಿ ಸೋಮವಾರಪೇಟೆ, ಶಾಂತಳ್ಳಿ ಮಾರ್ಗವಾಗಿ ಸೂರ್ಲಬ್ಬಿ-ಗರ್ವಾಲೆಗೆ ಕೆಎಸ್‍ಆರ್‍ಟಿಸಿ ಮಡಿಕೇರಿ ಡಿಪ್ಪೋದ ರೂಟ್ ನಂ. 10 ಹಾಗೂ 11 ಬಸ್ ಬಹಳ ಹಿಂದಿನ ಕಾಲದಿಂದಲೂ ಸಂಚರಿಸುತ್ತಿತ್ತು. ಕೊರೊನಾ ಬಂದ ನಂತರ 2 ಬಸ್‍ಗಳ ಸಂಚಾರವನ್ನು ಸ್ಥಗಿತಗೊಳಿಸಿದ್ದರಿಂದ ಕೃಷಿಕರು, ಜನಸಾಮಾನ್ಯರು ಪರದಾಡುವಂತಾಗಿದೆ. ಕುಗ್ರಾಮದ ಈ ಜನರು ವಾರದ ಸಂತೆಗೆ, ಕಂದಾಯ ಕಚೇರಿಗೆ, ಚೆಸ್ಕಾಂ, ಬ್ಯಾಂಕ್, ಕೃಷಿ ಇಲಾಖೆಗಳ ಕೆಲಸ ಇತ್ಯಾದಿ ಕಾರ್ಯಗಳಿಗೆ ಬರಲು ತೊಂದರೆಯಾಗಿದೆ. ಆಟೋ ರಿಕ್ಷಾದಲ್ಲಿ ರೂ. 400 ವರೆಗೆ ನೀಡಬೇಕು.
ಸರಕಾರ ಸೆಪ್ಟೆಂಬರ್ ಅಥವಾ ಅಕ್ಟೋಬರ್‍ನಲ್ಲಿ ಶಾಲಾ-ಕಾಲೇಜು ಆರಂಭಿಸಿಲು ಚಿಂತಿಸುತ್ತಿದ್ದು, ಬಸ್ ಸಂಚಾರವಿಲ್ಲದಿದ್ದರೆ ಶಾಲಾ-ಕಾಲೇಜುಗಳಿಗೆ ಮಕ್ಕಳು ತೆರಳಲು ಸಾಧ್ಯವಾಗುವುದಿಲ್ಲ. ಗ್ರಾಮಸ್ಥರ ಈ ಎಲ್ಲಾ ಸಮಸ್ಯೆಗಳನ್ನು ಮನಗಂಡು ಜಿಲ್ಲಾಧಿಕಾರಿ, ಶಾಸಕರು, ಜನಪ್ರತಿನಿಧಿಗಳು ಗ್ರಾಮಕ್ಕೆ ಬಸ್ ಸಂಚರಿಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.