ಕುಶಾಲನಗರ, ಆ. 30: ಕಾವೇರಿ ನದಿ ಬದಿಯಲ್ಲಿ ನಿಯಮ ಬಾಹಿರವಾಗಿ ಮನೆ ಕಟ್ಟಡವನ್ನು ನಿರ್ಮಿಸಿ ನದಿಗೆ ಕಲ್ಲುಬಂಡೆಗಳನ್ನು ತುಂಬಿಸುತ್ತಿರುವುದು ಕಂಡುಬಂದಿದೆ. ಕಳೆದ ಮೂರು ವರ್ಷಗಳಿಂದ ಕುಶಾಲನಗರ ಪಟ್ಟಣ ಸೇರಿದಂತೆ ನೆರೆಯ ಗುಡ್ಡೆಹೊಸೂರು, ಮುಳ್ಳುಸೋಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ನದಿ ದಂಡೆಯಲ್ಲಿ ಮನೆ ನಿರ್ಮಿಸಿರುವ ಜನರು ತಮ್ಮ ಮನೆಯ ರಕ್ಷಣೆಗಾಗಿ ನದಿಯನ್ನು ಒತ್ತುವರಿ ಮಾಡುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ.

ಕುಶಾಲನಗರ ಪಟ್ಟಣದ ಮಾರುಕಟ್ಟೆ ರಸ್ತೆ, ಗುಡ್ಡೆಹೊಸೂರು ಪಂಚಾಯಿತಿಯ ಮಾದಾಪಟ್ಟಣ, ಬಾಳುಗೋಡು-ರಸೂಲ್‍ಪುರ ವ್ಯಾಪ್ತಿಯ ನದಿ ಒತ್ತಿನಲ್ಲಿ ಇಂತಹ ಪ್ರಕರಣಗಳು ಕಂಡುಬಂದರೂ ಸ್ಥಳೀಯ ಆಡಳಿತ ಮಾತ್ರ ಸಂಪೂರ್ಣ ಮೌನ ವಹಿಸಿದೆ. ಇನ್ನೊಂದೆಡೆ ನದಿಯ ಬಫರ್‍ಜೋನ್ ವ್ಯಾಪ್ತಿಯ ಜಾಗದಲ್ಲಿ ನಿಯಮಬಾಹಿರವಾಗಿ ಬಡಾವಣೆ ನಿರ್ಮಿಸಲು ಅವಕಾಶ ಕಲ್ಪಿಸಿದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ನದಿ ದಂಡೆಯ ಎರಡೂ ಬದಿಯ 500 ಮೀಟರ್ ಅಂತರದಲ್ಲಿ ಕೃಷಿ ಹೊರತಾಗಿ ಯಾವುದೇ ವಸತಿ, ವಾಣಿಜ್ಯ, ಕಾರ್ಖಾನೆ ಮತ್ತಿತರ ಕಟ್ಟಡಗಳಿಗೆ ಅನುಮತಿ ಕಲ್ಪಿಸದಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದರೂ ಸ್ಥಳೀಯ ಆಡಳಿತ ಈ ಬಗ್ಗೆ ಕ್ರಮಕೈಗೊಳ್ಳದಿರುವ ಬಗ್ಗೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಗುಡ್ಡೆಹೊಸೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ಯಾಂ, ಕೂಡಲೇ ಸ್ಥಳ ಪರಿಶೀಲಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.