ಕೂಡಿಗೆ, ಆ. 30: ಕೂಡಿಗೆ ಸರಕಾರಿ ಕ್ರೀಡಾ ಪ್ರೌಢಶಾಲೆಯ ಸಭಾಂಗಣದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಮತ್ತು ದೇಶದ ಹಾಕಿ ದಿಗ್ಗಜ ಧ್ಯಾನ್ ಚಂದ್ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆ ಯನ್ನು ಕ್ರೀಡಾ ಶಾಲೆಯ ಮುಖ್ಯೋಪಾಧ್ಯಾಯಿನಿ ಕುಂತಿ ಬೋಪಯ್ಯ ನೆರವೇರಿಸಿದರು. ನಂತರ ಮಾತನಾಡಿ ದೇಶದ ಹಾಕಿ ದಿಗ್ಗಜ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡೆಯಾದ ಹಾಕಿಯಲ್ಲಿ ಸತತವಾಗಿ 1928, 1932, 1936 ಒಲಿಂಪಿಕ್ ಹಾಕಿ ಗೆಲುವು ಸಾಧಿಸಿ, ಹಾಕಿ ಕ್ರೀಡೆ ಯಲ್ಲಿ ದೇಶಕ್ಕೆ ಚಿನ್ನದ ಪದಕವನ್ನು ಗಳಿಸಿಕೊಟ್ಟಿರುತ್ತಾರೆ ಎಂದು ಸ್ಮರಿಸಿದರು.
ಮುಖ್ಯ ಅತಿಥಿಯಾಗಿದ್ದ ಹಿರಿಯ ಅಥ್ಲೆಟಿಕ್ ತರಬೇತುದಾರ ಅಂತೋನಿ ಡಿಸೋಜ ಮಾತನಾಡಿ, ಮೇಜರ್ ಧ್ಯಾನ್‍ಚಂದ್‍ರವರ ಹಾಕಿ ಆಟದ ಶೈಲಿ ಇಂದಿನ ಯುವಕರಿಗೆ ಮಾರ್ಗದರ್ಶನವಾಗಿದೆ ಎಂದರು. ಭಾರತದಲ್ಲಿ ಇವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ಲಭಿಸುವಂತಾಗಲಿ ಎಂದು ಅವರು ಹೇಳಿದರು.
ಈ ಸಂದರ್ಭ ಕೂಡಿಗೆ ಕ್ರೀಡಾ ಶಾಲೆಯ ಹಾಕಿ ತರಬೇತಿ ದಾರ ವೆಂಕಟೇಶ, ಅಥ್ಲೆಟಿಕ್ ತರಬೇತುದಾರ ಮಂಜುನಾಥ ಸೇರಿದಂತೆ ತರಬೇತುದಾರರು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.