ಶನಿವಾರಸಂತೆ, ಆ. 29: ಸಮೀಪದ ಅಂಕನಹಳ್ಳಿ ತಪೋವನ ಮನೆಹಳ್ಳಿ ಮಠದಲ್ಲಿ ಜಿಲ್ಲಾ ವೀರಶೈವ ಜಂಗಮ, ಅರ್ಚಕ ಮತ್ತು ಪುರೋಹಿತರ ಸಂಘ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆ ಸಹಭಾಗಿತ್ವದಲ್ಲಿ ಬಾದ್ರಪದ ಮಾಸದ ಮೊದಲ ಮಂಗಳವಾರ ವೀರಭದ್ರೇಶ್ವರ ಸ್ವಾಮಿ ಜಯಂತಿ ಆಚರಣೆಯೊಂದಿಗೆ ಕೊರೊನಾ ನಿಗ್ರಹ, ಪ್ರಕೃತಿ ವಿಕೋಪದಿಂದ ನಲುಗಿ ಹೋಗುತ್ತಿರುವ ಜಿಲ್ಲೆಯ ರಕ್ಷಣೆ ಹಾಗೂ ಸುಭಿಕ್ಷಾ ಕೊಡಗು ನಿರ್ಮಾಣಕ್ಕೆ ಸಂಕಲ್ಪ ತೊಟ್ಟು ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿತು.
ಮಠದಲ್ಲಿ ಮಧ್ಯಾಹ್ನ 1 ಗಂಟೆಯಿಂದ ವೀರಭದ್ರೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಅಷ್ಟೋತ್ತರ ಇನ್ನಿತರ ವಿಶೇಷ ಪೂಜಾ ಕೈಂಕರ್ಯಗಳನ್ನು ಮಠಾಧೀಶ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಸಾನಿಧ್ಯದಲ್ಲಿ ಜಂಗಮ ಅರ್ಚಕರು ಹಾಗೂ ಪುರೋಹಿತರು ನೆರವೇರಿಸಿದರು.
ಬಳಿಕ ಸ್ವಾಮಿಯ ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಇರಿಸಿ ಮಂಗಳವಾದ್ಯ ಹಾಗೂ ವೀರಗಾಸೆ ಕುಣಿತದೊಂದಿಗೆ ಮಠದ ದ್ವಾರದವರೆಗೆ ಮೆರವಣಿಗೆ ಮಾಡಲಾಯಿತು. ನಂತರ ಉತ್ಸವ ಮೂರ್ತಿಯನ್ನು ಮಠದ ಆವರಣದಲ್ಲಿರುವ ಸ್ವಾಮಿಯ ದೇವಾಲಯಕ್ಕೆ ತಂದು ಇರಿಸಲಾಯಿತು. ಪುರೋಹಿತರು ಲೋಕ ಕಲ್ಯಾಣ ಕಾರ್ಯಸಿದ್ಧಿಗಾಗಿ ಶ್ಲೋಕ, ಮಂತ್ರ ಘೋಷಗಳನ್ನು ಮಾಡಿದರು. ಗ್ರಾಮ ಹಾಗೂ ಹೋಬಳಿಯಾದ್ಯಂತ ನೂರಾರು ಭಕ್ತರು ಪೂಜಾ ಕಾರ್ಯಕ್ರಮಗಳಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. ತೀರ್ಥ-ಪ್ರಸಾದ ವಿನಿಯೋಗವಾಯಿತು.
ಮನೆಹಳ್ಳಿ ಮಠಾಧೀಶ ಮಹಾಂತ ಸ್ವಾಮೀಜಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್. ಮಹೇಶ್, ತಾಲೂಕು ವೀರಶೈವ ಸಭಾ ಅಧ್ಯಕ್ಷ ಹಾಲಪ್ಪ, ಜಿಲ್ಲಾ ಮಹಾಸಭಾ ಉಪಾಧ್ಯಕ್ಷ ಕಾಂತರಾಜ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಜಯರಾಜ್, ಖಜಾಂಚಿ ಡಿ.ಬಿ. ಸೋಮಪ್ಪ, ಜಿಲ್ಲಾ ಅರ್ಚಕರ ಸಂಘದ ಕಾರ್ಯದರ್ಶಿ ಸೋಮಶೇಖರ ಶಾಸ್ತ್ರಿ, ಪ್ರಮುಖರಾದ ಸರಳಾಕ್ಷಿ, ಬಸಪ್ಪ ಇತರರು ಹಾಜರಿದ್ದರು.