ಮಡಿಕೇರಿ, ಆ. 29: ಇತ್ತೀಚಿನ ದಿನಗಳಲ್ಲಿ ಆನೆಕಾಡು ಮತ್ತು ಮೀನುಕೊಲ್ಲಿ ಅರಣ್ಯ ಪ್ರದೇಶದ ಪಕ್ಕದಲ್ಲಿರುವ ಕೆದಕಲ್, ಮೋದೂರು, ಹೊರೂರು, ಅತ್ತೂರು ನಲ್ಲೂರು, ಅಭ್ಯತ್‍ಮಂಗಲ, ಚೆಟ್ಟಳ್ಳಿ ಮತ್ತಿತರ ಗ್ರಾಮಗಳಿಗೆ ಕಾಡಾನೆಗಳ ಹಿಂಡು ನುಗ್ಗಿ ತೋಟಗಳಿಗೆ ವಿಪರೀತ ನಷ್ಟ ಉಂಟುಮಾಡುತ್ತಿರುವ ಬಗ್ಗೆ ಹಾಗೂ ಇತ್ತೀಚಿನ ದಿನದಲ್ಲಿ ಒಂಟಿ ಸಲಗ ದಾಳಿಗೆ ಮಹಿಳೆಯೊಬ್ಬರು ಸಾವನ್ನಪ್ಪಿದ ಹಿನ್ನೆಲೆ ತಾ. 25ರಂದು ವನ್ಯಜೀವಿ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಆನೆ ಯೋಜನೆಯ ನಿರ್ದೇಶಕ ನಟೇಶ್, ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೆಹರು ಹಾಗೂ ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್ ಮತ್ತು ಸಿಬ್ಬಂದಿ ಹೊರೂರು ಗ್ರಾಮಕ್ಕೆ ಆಗಮಿಸಿ, ಹೊರೂರು ಕ್ಲಬ್‍ನಲ್ಲಿ ಕಾಫಿ ಬೆಳೆಗಾರರ ಹಾಗೂ ರೈತರ ಅಹವಾಲನ್ನು ಆಲಿಸಿದರು.

ಸಭೆಯಲ್ಲಿ ಪಾಲ್ಗೊಂಡ ವಿವಿಧ ಗ್ರಾಮಗಳ ಬೆಳೆಗಾರರು ತಾವು ಅನುಭವಿಸುತ್ತಿರುವ ಸಂಕಷ್ಟ ಮತ್ತು ಬೆಳೆ ನಾಶದ ಬಗ್ಗೆ ವಿವರಿಸಿದರು. ಕಾಡಾನೆಗಳ ಹಾವಳಿಯಿಂದಾಗಿ ತೋಟದ ಕೆಲಸಕ್ಕೆ ಹೋಗಲು ಕಾರ್ಮಿಕರು ಹಿಂಜರಿಯುತ್ತಿರುವ ಬಗ್ಗೆ ಹಾಗೂ ರಸ್ತೆಯಲ್ಲಿ ಜನರು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಓಡಾಡಲು, ಮಕ್ಕಳು ಶಾಲೆಗೆ ಹೋಗಲು ಹಿಂಜರಿಯುತ್ತಿರುವ ಬಗ್ಗೆ ಮನದಟ್ಟು ಮಾಡಲಾಯಿತು. ಈ ಹಿನ್ನೆಲೆಯಲ್ಲಿ ತುರ್ತಾಗಿ 2 ಒಂಟಿ ಸಲಗಗಳನ್ನು ಅರೆವಳಿಕೆ ಬಳಸಿ ಹಿಡಿಯುವ ಬಗ್ಗೆ ಹಾಗೂ ರೈಲ್ವೆ ಹಳಿಗಳನ್ನು ಉಪಯೋಗಿಸಿ ತಂತಿಬೇಲಿಯನ್ನು ನಿರ್ಮಿಸುವ ಬಗ್ಗೆ ಕೋರಿಕೊಳ್ಳಲಾಯಿತು.

ಗ್ರಾಮಸ್ಥರ ಅಹವಾಲಿಗೆ ಸ್ಪಂದಿಸಿದ, ಆನೆ ಯೋಜನೆ ನಿರ್ದೇಶಕರು, ಒಂಟಿ ಸಲಗವನ್ನು ಹಿಡಿದು ಸ್ಥಳಾಂತರಿಸುವ ಬಗ್ಗೆ ಹಾಗೂ 5 ಕಿ.ಮೀ. ಉದ್ದದ ರೈಲ್ವೆ ಹಳಿ ಬೇಲಿ ನಿರ್ಮಿಸುವ ಬಗ್ಗೆ ತುರ್ತಾಗಿ ಕ್ರಮ ತೆಗೆದುಕೊಳ್ಳುವ ಬಗ್ಗೆ ಭರವಸೆ ನೀಡಿದರು.

ಗ್ರಾಮಸ್ಥರ ಪರವಾಗಿ ಎಲ್ಲಾ ಅಂಶಗಳನ್ನು ಒಳಗೊಂಡಂತೆ ಮನವಿಯನ್ನು ಆನೆ ಯೋಜನೆ ನಿರ್ದೇಶಕರಿಗೆ ಸಲ್ಲಿಸಲಾಯಿತು.