ಕೂಡಿಗೆ, ಆ. 29: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿಯಲ್ಲಿರುವ ಮೀನುಗಾರಿಕೆ ಇಲಾಖೆಯ ವತಿಯಿಂದ ಮೀನುಮರಿ ಸಾಕಾಣಿಕೆಗೆ ಅನುಕೂಲವಾಗುವಂತೆ ನೂತನ ಮೀನುಮರಿ ಘಟಕಗಳ ಕಾಮಗಾರಿ ಭರದಿಂದ ನಡೆಯುತ್ತಿದೆ.
ಹಾರಂಗಿಯ ಮೀನು ಮರಿ ಉತ್ಪಾದನಾ ಕೇಂದ್ರದಲ್ಲಿ ಕಳೆದ ಒಂದು ವರ್ಷದ ಹಿಂದೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ರೂ. 2 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ಕಾಮಗಾರಿಯು ಶೇ. 70 ರಷ್ಟು ಮುಗಿದಿದ್ದು, ಕೊರೊನಾ ಹಿನ್ನೆಲೆ ಕಳೆದ ಆರು ತಿಂಗಳುಗಳಿಂದ ಕಾಮಗಾರಿಯು ಸ್ಥಗಿತಗೊಂಡಿತ್ತು. ಇದೀಗ ಏಳು ಮೀನುಮರಿಯ ತೊಟ್ಟಿಗಳು ಮತ್ತು ಅದಕ್ಕೆ ಸಂಬಂಧಿಸಿದ ಒಳ ಚರಂಡಿ ವ್ಯವಸ್ಥೆ, ಉಪ ರಸ್ತೆ ಸೇರಿದಂತೆ ನೂತನ ಮಾದರಿಯ ನೀರು ಸಂಗ್ರಹ ತೊಟ್ಟಿಗಳ ಕಾಮಗಾರಿಯು ಭರದಿಂದ ನಡೆಯುತ್ತಿದೆ. ಈಗಾಗಲೇ ಕಳೆದ ವಾರ ರಾಜ್ಯಮಟ್ಟದ ಇಲಾಖೆಯ ನಿರ್ದೇಶಕರು, ಕಾರ್ಯದರ್ಶಿ ಕಾಮಗಾರಿ ವೀಕ್ಷಣೆ ಮಾಡಿ ಸರಕಾರದಿಂದ ಬಿಡುಗಡೆ ಆಗಬೇಕಾಗಿರುವ ಹಣದ ಮೊತ್ತವನ್ನು ಬಿಡುಗಡೆಗೊಳಿಸುವ ಭರವಸೆಯನ್ನು ನೀಡಿದರು. ಅದರಂತೆ ವಿವಿಧ ಹೈಬ್ರೀಡ್ ತಳಿಯ ಮೀನು ಮರಿಗಳನ್ನು ಉತ್ಪತ್ತಿ ಮಾಡುವ ಮೂಲಕ ರೈತರಿಗೆ ವಿವಿಧ ಯೋಜನೆಯ ಮೂಲಕ ನೀಡಲಾಗುವುದು ಎಂದು ಹಾರಂಗಿ ಕೇಂದ್ರ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ