ಕುಶಾಲನಗರ, ಆ. 27: ಕುಶಾಲನಗರದಲ್ಲಿ ಕಾಂಗ್ರೆಸ್ನ ಮಾತೃ ಸಮಿತಿ ಹಾಗೂ ಯುವ ಘಟಕಗಳು ತಮ್ಮದೇ ಚಿಂತನೆಗಳ ಹೊಸ ಹಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಗೊಂದಲ ಇಲ್ಲ ಎಂದು ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಕೆಂಪರಾಜು ಗೌಡ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಕುಶಾಲನಗರದಲ್ಲಿ ಕಳೆದ ಕೆಲವು ಸಮಯದ ಅವಧಿಯಲ್ಲಿ ಪಕ್ಷದಲ್ಲಿ ಗುಂಪುಗಾರಿಕೆ ಇರುವ ಬಗ್ಗೆ ಮಾತನಾಡಿ, ಯಾವುದೇ ಕಾರಣಕ್ಕೂ ಎರಡು ಗುಂಪುಗಳು ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿಲ್ಲ ಎಂದರಲ್ಲದೆ ಮಾತುಕತೆ ಮೂಲಕ ಸರಿಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಮುಂಬರುವ ಚುನಾವಣೆಗಳಲ್ಲಿ ರಾಜ್ಯದಾದ್ಯಂತ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಬೇಕು ಎಂದರು.
ಈ ಸಂದರ್ಭ ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ವಿದ್ಯಾ ಬಾಲಚಂದ್ರನ್, ಯುವ ಕಾಂಗ್ರೆಸ್ನ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಶರೀಫ್, ಮಡಿಕೇರಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಮಿಥುನ್ ಹಾನಗಲ್, ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಜಮ್ಮಡ ಸೋಮಣ್ಣ ಇದ್ದರು.