ಕೂಡಿಗೆ, ಆ. 27: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮ ಸೇರಿದಂತೆ ಪಕ್ಕದ ಗ್ರಾಮಗಳಲ್ಲಿ ಕಾಡಾನೆಗಳಿಂದ ನೂರಾರು ಎಕರೆಗಳಷ್ಟು ಬೆಳೆ ನಷ್ಟ ಉಂಟಾಗಿದ್ದು, ಅರಣ್ಯ ಇಲಾಖೆ ಸಮರ್ಪಕವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಬೇಸತ್ತು ಗ್ರಾಮದ ರೈತರು ಸ್ವಯಂಪ್ರೇರಿತರಾಗಿ ಸೋಲಾರ್ ತಂತಿ ಅಳವಡಿಕೆಗೆÉ ಮುಂದಾಗಿದ್ದಾರೆ.

ಅರಣ್ಯ ಇಲಾಖೆಯವರು ಕೇವಲ ಭರವಸೆಗಳನ್ನು ನೀಡುತ್ತಾ ಬಂದರೆ ಹೊರತು ಯಾವದೇ ಪ್ರಯೋಜವಾಗಿಲ್ಲ. ಅಲ್ಲದೆ ಅರಣ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ಮಾಡಿದರೂ ಯಾವುದೇ ಕ್ರಮಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಈ ವರ್ಷದ ಬೆಳೆಯನ್ನಾದರೂ ರಕ್ಷಿಸಲು ತಾತ್ಕಾಲಿಕವಾಗಿ 60-70 ಎಕರೆಗಳಷ್ಟು ಪ್ರದೇಶದ ವ್ಯಾಪ್ತಿಗೆ ಅಂದಾಜು 80 ಸಾವಿರಕ್ಕೂ ಹೆಚ್ಚಿನ ಹಣವನ್ನು ವ್ಯಯಿಸಿ ಸೋಲಾರ್ ವಸ್ತುಗಳನ್ನು ಖರೀದಿಸಿರುವ ಗ್ರಾಮಸ್ಥರು, ನೂರಾರು ರೈತರು ಸೋಲಾರ್ ವಿದ್ಯುತ್ ಬೇಲಿ ಅಳವಡಿಕೆಗೆ ಮುಂದಾಗಿದ್ದಾರೆ.

ಹುದುಗೂರು ವ್ಯಾಪ್ತಿಯ ಹತ್ತು ಗ್ರಾಮಗಳಲ್ಲಿ ಹಾರಂಗಿ ಅಚ್ಚುಕಟ್ಟು ಪ್ರದೇಶದ ಎಲ್ಲಾ ಬೆಳೆಗಳನ್ನು ನಾಶಪಡಿಸಿರುವ ಪ್ರದೇಶಗಳಿಗೆ ಅರಣ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಭೇಟಿ ನೀಡುವ ಹೇಳಿಕೆಯನ್ನು ನೀಡಿದ್ದರೂ ಸ್ಥಳ ಪರಿಶೀಲನೆ ಮಾಡುತ್ತಿಲ್ಲ. ಅರಣ್ಯ ಇಲಾಖೆಯವರು ಸಮಗ್ರವಾಗಿ ಕಾಡಾನೆಗಳಿಂದ ನಷ್ಟವಾದ ಪ್ರದೇಶಗಳಿಗೆ ಸೋಲಾರ್ ಬೇಲಿ ಮತ್ತು ರೈಲ್ವೇ ಕಂಬಿಗಳನ್ನು ಅಳವಡಿಸುವ ಕಾರ್ಯಕ್ಕೆ ಮೊದಲ ಆದ್ಯತೆಯನ್ನು ನೀಡಬೇಕೆಂಬದು ಈ ಭಾಗದ ರೈತರ ಒತ್ತಾಯವಾಗಿದೆ.

-ಕೆ.ಕೆ. ನಾಗರಾಜಶೆಟ್ಟಿ