ಮಡಿಕೇರಿ, ಆ. 27: ಆಸ್ತಿಯಲ್ಲಿ ಪಾಲು ಕೊಡುವಂತೆ ಪೀಡಿಸುತ್ತಿದ್ದ ಮಗ ತಂದೆಯೊಂದಿಗೆ ಜಗಳ ತೆಗೆದು ತಂದೆಯ ಮೇಲೆ ಗುಂಡು ಹಾರಿಸಿದ್ದು, ಇದೀಗ ಮಗ ಪೊಲೀಸರ ಅತಿಥಿಯಾಗಿದ್ದಾನೆ.

ಮರಗೋಡು ಬಳಿಯ ಕಟ್ಟೆಮಾಡು ಗ್ರಾಮ ನಿವಾಸಿ, ಬಡಕಡ ಎ. ಬೋಪಯ್ಯ ಅವರ ಪುತ್ರ ಕುಶಾಲಪ್ಪ ಎಂಬಾತನೇ ತನ್ನ 71 ವರ್ಷ ಪ್ರಾಯದ ತಂದೆಯ ಮೇಲೆ ಗುಂಡು ಹಾರಿಸಿ, ಇದೀಗ ಬಂಧನದಲ್ಲಿರುವ ಆರೋಪಿಯಾಗಿದ್ದಾನೆ. ಬೋಪಯ್ಯ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಮೊದಲನೇ ಪುತ್ರ ಕುಶಾಲಪ್ಪ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಗನ್‍ಮ್ಯಾನ್ ಆಗಿ ಕೆಲಸ ಮಾಡಿ ಕೊಂಡಿದ್ದು, ಕೊರೊನಾದಿಂದಾಗಿ ಕೆಲಸವಿಲ್ಲದೆ ವಾಪಸ್ ಬಂದು ಮನೆಯಲ್ಲಿದ್ದಾನೆ. ಎರಡನೇ ಪುತ್ರ ಸುಬ್ರಮಣಿಗೆ ವಿವಾಹವಾಗಿದ್ದು, ಇಬ್ಬರು ಮಕ್ಕಳು ಹಾಗೂ ಪತ್ನಿಯೊಂದಿಗೆ ಮನೆಯಲ್ಲೇ ಇದ್ದಾರೆ.

ಬೋಪಯ್ಯ ಅವರಿಗೆ 6 ಎಕರೆ ಕಾಫಿ ತೋಟವಿದ್ದು, ತೋಟದಲ್ಲಿ ತನ್ನ ಪಾಲು ನೀಡುವಂತೆ ಕುಶಾಲಪ್ಪ ಪ್ರತಿನಿತ್ಯ ಮದ್ಯಸೇವಿಸಿ ಬಂದು ತಂದೆಯೊಂದಿಗೆ ಜಗಳ ಮಾಡುತ್ತಿದ್ದ. ತಾ. 26 ರಂದು ಸಂಜೆ ಮದ್ಯ ಸೇವನೆ ಮಾಡಿ ತನ್ನ ಸ್ನೇಹಿತ ತಿಮ್ಮಯ್ಯನೊಂದಿಗೆ ಮನೆಗೆ ಬಂದ ಕುಶಾಲಪ್ಪ ಅಂಗಳದಲ್ಲಿ ತಂದೆಯೊಂದಿಗೆ ಜಗಳವಾಡಿ ಕೈಯ್ಯಲ್ಲಿದ್ದ ದೊಣ್ಣೆಯಿಂದ ಹಲ್ಲೆಗೆ ಮುಂದಾಗಿದ್ದಾನೆ. ರಕ್ಷಣೆಗಾಗಿ ಬೋಪಯ್ಯ ಅಲ್ಲಿಯೇ ಬಿದ್ದಿದ್ದ ಮರದ ತುಂಡಿನಿಂದ ಕುಶಾಲಪ್ಪನ ಮೇಲೆ ಬೀಸಿದಾಗ ಅದು ಆತನ ತಲೆಗೆ ತಾಗಿ ಗಾಯವಾಗಿದೆ. ಈ ಸಂದರ್ಭದಲ್ಲಿ ಮನೆಯೊಳಗೆ ಹೋಗಿ ಬಂದೂಕು ತೆಗೆದುಕೊಂಡು ಮೇಲಂತಸ್ತಿನ ಬಾಲ್ಕನಿಯಿಂದ ತಂದೆಯ ಮೇಲೆ ಗುಂಡು ಹಾರಿಸಿದ್ದಾನೆ. ಅದು ಗಾಳಿಯಲ್ಲಿ ತೂರಿ ಹೋಗಿದ್ದು, ಬೋಪಯ್ಯ ಹೆದರಿ ಮನೆಯ ಒಳಗೆ ಓಡಿದ್ದಾರೆ. ಈ ಸಂದರ್ಭ ಕುಶಾಲಪ್ಪ ಇನ್ನೊಂದು ಗುಂಡು ಹಾರಿಸಿದ್ದಾನೆ. ಅಷ್ಟರಲ್ಲಿ ಬೋಪಯ್ಯ ಓಡಿ ಹೋಗಿ ಮನೆಯೊಳಗಡೆ ಸೇರಿಕೊಂಡಿದ್ದು, ಮಗ ಹೊರ ಹೋದ ಮೇಲೆ ಬಂದು ಪೊಲೀಸ್ ಠಾಣೆಯಲ್ಲಿ ಪುಕಾರು ನೀಡಿರುವದಾಗಿ ಪುಕಾರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಅವರು ಆರೋಪಿ ಕುಶಾಲಪ್ಪನನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.