ಕಣಿವೆ, ಆ. 27: ಕುಶಾಲನಗರದ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ಅವರು ಕೊರೊನಾದಿಂದಾಗಿ ಮನೆಯಲ್ಲೇ ಕುಳಿತಿರುವ ಸಹಕಾರ ಸಂಘದ ಸದಸ್ಯರ ಕುಟುಂಬದ ಶಾಲಾ ಮಕ್ಕಳಿಗೆ ಆನ್‍ಲೈನ್ ಕ್ಲಾಸ್ ನಡೆಸಲು ಅಗತ್ಯ ಸೌಕರ್ಯ ಒದಗಿಸುವ ಕುರಿತಾಗಿ ತೀರ್ಮಾನಿಸಿದ್ದರು. ಇದರ ಪ್ರಯೋಜನ ಪಡೆಯಲು ಯಾರೂ ಕೂಡ ಮುಂದೆ ಬರದ ಕಾರಣ ಕುಶಾಲನಗರ ಪಟ್ಟಣ ವ್ಯಾಪ್ತಿಯ ವಿವಿಧ ಆರು ಶಾಲೆಗಳಿಗೆ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡು ಅವರು ಶಾಲಾ ಮುಖ್ಯ ಶಿಕ್ಷಕರ ಸಭೆ ನಡೆಸಿ ಸಹಕಾರ ಸಂಘದ ಆನ್‍ಲೈನ್ ಯೋಜನೆಯ ಸಾಧಕ ಬಾಧಕದ ಕುರಿತು ಮುಖ್ಯ ಶಿಕ್ಷಕರಿಂದ ಮಾಹಿತಿ ಪಡೆದರು. ಬಳಿಕ ಮತ್ತೆ ಕುಶಾಲನಗರ ವ್ಯಾಪ್ತಿಯ ಆರು ಶಾಲೆಗಳ ಎಲ್ಲಾ ಶಿಕ್ಷಕರು ಹಾಗೂ ಮುಖ್ಯ ಶಿಕ್ಚಕರ ಸಭೆ ಕರೆದು ಚರ್ಚಿಸಿ ಮುಂದಿನ ಯೋಜನೆ ರೂಪಿಸಲು ತೀರ್ಮಾನಿಸಲಾಯಿತು.