ಕೂಡಿಗೆ/ಕಣಿವೆ, ಆ. 27: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡುಮಂಗಳೂರು ಗ್ರಾಮದ ಸರ್ವೆ ನಂಬರ್ 28/1ರ ಜಾಗ ಒಂದಕ್ಕೆ ಇಬ್ಬರಿಗೂ ಹಕ್ಕು ಪತ್ರವನ್ನು ನೀಡಿರುವ ಪ್ರಸಂಗ ಕಂದಾಯ ಇಲಾಖೆಯಿಂದ ನೆಡೆದಿದೆ. ಕೂಡುಮಂಗಳೂರು ಗ್ರಾಮದಲ್ಲಿ 1975 ರಲ್ಲಿ ಇಂದ್ರಾಣಿ ಎಂಬ ಮಹಿಳೆ ವಾಸವಿದ್ದ ಸಂದರ್ಭದಲ್ಲಿ ಒಂದು ಜಾಗಕ್ಕೆ ಹಕ್ಕು ಪತ್ರವನ್ನು ನೀಡಲಾಗಿತ್ತು. ಇಂದ್ರಾಣಿ ಅವರು ಈ ಜಾಗದಲ್ಲಿ ಮನೆಯನ್ನು ಕೂಡ್ಲೂರು ಗ್ರಾಮದ ಮಹದೇವಮ್ಮ ಹಾಗೂ ನಂಜುಡನವರಿಗೆ ಭೋಗ್ಯಕ್ಕೆಂದು ನೀಡಿ ತನ್ನ ಮಗಳ ಮನೆಯಲ್ಲಿ ವಾಸಿಸುತ್ತಿದ್ದರು.
ಇದೇ ಜಾಗದಲ್ಲಿ ಮಹದೇವಮ್ಮ ಕಳೆದ 20 ವರ್ಷಗಳಿಂದ ಇದ್ದ ಕಾರಣ ಈ ಜಾಗಕ್ಕೆ ಅವರಿಗೂ ಹಕ್ಕುಪತ್ರವನ್ನು ನೀಡಲಾಗಿದೆ. ಹಕ್ಕುಪತ್ರ ಆಧಾರದ ಮೇಲೆ 9/11 ದಾಖಲೆ ಮಾಡಿರುವುದು ಕಂಡುಬಂದ ನಂತರ ಇಂದ್ರಾಣಿ ಮತ್ತು ಗ್ರಾಮಸ್ಥರು ಹೊಸದಾಗಿ ಆಗಿರುವ ಹಕ್ಕುಪತ್ರವನ್ನು ರದ್ದು ಮಾಡಬೇಕೆಂದು ಜಿಲ್ಲಾಧಿಕಾರಿ ಹಾಗೂ ತಾಲೂಕು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಆದ್ದರಿಂದ. ಗ್ರಾಮ ಪಂಚಾಯಿತಿ ವತಿಯಿಂದ 9/11 ದಾಖಲೆ ನಮೂನೆ ಮಾಡಿರುವುದನ್ನು ರದ್ದು ಮಾಡಬೇಕೆಂದು ಗ್ರಾಮದ ಅನೇಕ ಮಹಿಳೆಯರು ಮತ್ತು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರುಗಳು ಕೂಡುಮಂಗಳೂರು ಗ್ರಾ.ಪಂ. ಮುಂದೆ ಮೌನ ಮೆರವಣಿಗೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭ ಇಂದ್ರಾಣಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರುಗಳಾದ ಪುಟ್ಟರಾಜ, ಸುರೇಶ್, ಹರೀಶ್, ಸಾವಿತ್ರಿ, ಹರಿಣಾಕ್ಷಿ, ಮಾಲ, ಶಾಂಭವಿ, ಸರಸ್ವತಿ ಸೇರಿದಂತೆ ಅನೇಕರು ಹಾಜರಿದ್ದರು.
ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯಿಶಾ ಅವರಲ್ಲಿ ಮಾಹಿತಿ ಬಯಸಿದಾಗ, ಆ ಹಕ್ಕು ಪತ್ರ ಬದಲಾವಣೆ ತಹಶೀಲ್ದಾರ್ ಕಚೇರಿಯಿಂದ ಆಗಿರುವಂತಹದ್ದು. ತಹಶೀಲ್ದಾರ್ ನೀಡಿದ ಹಕ್ಕುಪತ್ರಕ್ಕೆ ನಾವು 9/11 ನೀಡಲೇ ಬೇಕಾಗುತ್ತದೆ. ದೂರುದಾರರು ಈಗಲೂ ತಹಶೀಲ್ದಾರ್ ಬಳಿ ತೆರಳಿ ಹಕ್ಕು ಪತ್ರ ವಜಾಗೊಳಿಸಿದರೆ ನಾವು ವಿತರಿಸಿದ್ದ 9/11 ಕೂಡ ರದ್ದು ಮಾಡುತ್ತೇವೆ. ಈ ಹಕ್ಕು ಪತ್ರ ಬದಲಾವಣೆ ನಮ್ಮ ಕಚೇರಿಗೆ ಸಂಬಂಧಿಸಿದ್ದಲ್ಲ ಎಂದು ತಿಳಿಸಿದ್ದಾರೆ.