ಪೆÇನ್ನಂಪೇಟೆ, ಆ. 26: ಕೊಡಗು ಜಿಲ್ಲಾದ್ಯಂತ ಮೀನು ಮತ್ತು ವಿವಿಧ ಮಾಂಸಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಗ್ರಾಹಕರಿಗೆ ತೊಂದರೆ ಯಾಗುತ್ತಿದ್ದು, ಜಿಲ್ಲಾದ್ಯಂತ ಮೀನು ಮತ್ತು ಮಾಂಸಗಳಿಗೆ ಏಕದರ ನಿಗದಿಪಡಿಸಿ ಆದೇಶ ಹೊರಡಿಸ ಬೇಕೆಂದು ಜಿ.ಪಂ. ಸದಸ್ಯರ ನಿಯೋಗ ವೊಂದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದೆ.

ಮಡಿಕೇರಿಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು ಭೇಟಿ ಮಾಡಿದ ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಅವರ ನೇತೃತ್ವದ ನಿಯೋಗ, ಜಿಲ್ಲೆಯ ವಿವಿಧ ಪಟ್ಟಣಗಳಲ್ಲಿ ಮೀನು ಮತ್ತು ಮಾಂಸಗಳನ್ನು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ದಂಧೆಗೆ ಕೂಡಲೇ ಕಡಿವಾಣ ಹಾಕುವಂತೆ ಒತ್ತಾಯಿಸಿದೆ.

ಇದೀಗ ಜಿಲ್ಲೆಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ದರದ ಮಾರಾಟ ಗ್ರಾಹಕರಿಂದ ಹಣದೋಚುವ ದಂಧೆಯಾಗಿ ಮಾರ್ಪಟ್ಟಿದೆ. ಅದರಲ್ಲೂ ಗೋಣಿಕೊಪ್ಪಲು ಮತ್ತು ವೀರಾಜಪೇಟೆ ಭಾಗದಲ್ಲಿ ಮಿತಿಮೀರಿದ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಗ್ರಾಹಕ ರನ್ನು ಸುಲಿಗೆ ಮಾಡಲಾಗುತ್ತಿದೆ. ಇದು ಹೀಗೆ ಮುಂದುವರಿದರೆ ಜನತೆ ರೊಚ್ಚಿಗೇಳುವ ಸಾಧ್ಯತೆ ಇದೆ ಎಂದು ಈ ನಿಯೋಗ ಜಿಲ್ಲಾಧಿಕಾರಿಗಳ ಗಮನ ಸೆಳೆದಿದೆ.

ಕೋವಿಡ್-19 ನಿಯಂತ್ರಣಕ್ಕಾಗಿ ಜಾರಿಯಾಗಿದ್ದ ಕಳೆದ ಲಾಕ್‍ಡೌನ್ ಸಂದರ್ಭದಲ್ಲಿ ಕುರಿಗಳನ್ನು ಹೊರ ಜಿಲ್ಲೆಯಿಂದ ತರಬೇಕಾದ್ದರಿಂದ ಕೆ.ಜಿ.ವೊಂದಕ್ಕೆ ರೂ 450ರಂತೆ ಇದ್ದ ಕುರಿಮಾಂಸದ ಮಾರಾಟ ಬೆಲೆಯನ್ನು ಜಿಲ್ಲಾಡಳಿತ ರೂ. 650ಕ್ಕೆ ನಿಗದಿಪಡಿಸಿತ್ತು.

ಇದೀಗ ಲಾಕ್‍ಡೌನ್ ತೆರವುಗೊಂಡು ಕುರಿ ಸಾಗಾಟಕ್ಕೆ ಯಾವುದೇ ನಿಬರ್ಂಧವಿಲ್ಲದಿದ್ದರೂ ಜಿಲ್ಲೆಯಲ್ಲಿ ಕುರಿಮಾಂಸ ಕೆ.ಜಿ. ವೊಂದಕ್ಕೆ ರೂ. 650 ರಿಂದ 700 ರವರೆಗೆ ಮಾರಾಟವಾಗುತ್ತಿದೆ. ಜಿಲ್ಲಾಡಳಿತದ ಹಿಂದಿನ ಆದೇಶವನ್ನೇ ಬಂಡವಾಳವಾಗಿಸಿಕೊಂಡಿರುವ ಕೆಲ ವರ್ತಕರು ಜನರಿಂದ ಹೆಚ್ಚಿನ ಹಣ ಪಡೆದು ಸುಲಿಗೆ ನಡೆಸುತ್ತಿದ್ದಾರೆ. ಅಲ್ಲದೆ ಕೋಳಿ, ಹಂದಿಮಾಂಸ ಮತ್ತು ಮೀನಿನ ಮಾರಾಟ ಬೆಲೆಯಲ್ಲಿಯೂ ತಾರತಮ್ಯವಿದ್ದು, ವಿವಿಧ ಪಟ್ಟಣಗಳಲ್ಲಿ ಬೇರೆ ಬೇರೆ ರೀತಿಯ ದರದಲ್ಲಿ ಮಾರಾಟವಾಗುತ್ತಿದೆ. ಮೊದಲೇ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಜನರು ಹೆಚ್ಚಿನ ಬೆಲೆಯಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳಿಗೆ ಬೋಪಣ್ಣ ಅವರು ಮನವರಿಕೆ ಮಾಡಿದರು.

ಜಿಲ್ಲೆಯಲ್ಲಿ ಮೀನು ಮತ್ತು ಮಾಂಸಗಳಿಗೆ ಏಕರೀತಿ ದರ ನಿಗದಿ ಪಡಿಸಲು ಜಿಲ್ಲಾ ಪಂಚಾಯಿತಿಯ ಹಿಂದಿನ ಸಾಮಾನ್ಯ ಸಭೆಯಲ್ಲಿ ತೀರ್ಮಾನವಾಗಿದೆ.

ಅದನ್ನು ಅನುಷ್ಠಾನಗೊಳಿಸಲು ಎಲ್ಲಾ ಪಿಡಿಓಗಳಿಗೆ ಮತ್ತು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳಿಗೆ ಕೂಡಲೇ ನಿರ್ದೇಶನ ನೀಡಬೇಕು ಎಂದು ಇದೀಗ ಕೊಡಗು ಜಿ.ಪಂ. ಪ್ರಭಾರ ಮುಖ್ಯ ಕಾರ್ಯನಿರ್ವ ಹಣಾಧಿಕಾರಿಯೂ ಆಗಿರುವ ಅನೀಸ್ ಕಣ್ಮಣಿ ಜಾಯ್ ಅವರಲ್ಲಿ ಜಿ.ಪಂ. ಸದಸ್ಯರ ಈ ನಿಯೋಗ ಮನವಿ ಮಾಡಿತು.

ಪ್ರಕೃತಿ ವಿಕೋಪದಿಂದ ಬೆಳೆ ನಾಶಗೊಂಡ ರೈತರಿಗೆ ಕೂಡಲೇ ಪರಿಹಾರ ಒದಗಿಸಬೇಕು. ನೀರು ನುಗ್ಗಿದ ಪರಿಣಾಮ ತೋಟ ಮತ್ತು ಗದ್ದೆಗಳಲ್ಲಿ ಶೇಖರಣೆಯಾಗಿರುವ ಮರಳನ್ನು ಸಾಗಿಸಲು ಅನುಮತಿ ನೀಡುವಂತೆ ಸಂಬಂಧಿಸಿದವರಿಗೆ ಸೂಕ್ತ ಆದೇಶ ನೀಡಬೇಕು ಎಂದು ನಿಯೋಗ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿತು.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ, ಮೀನು ಮತ್ತು ಮಾಂಸಗಳಿಗೆ ದರ ನಿಗದಿಗೆ ಸಂಬಂಧಿಸಿದಂತೆ ಕೂಡಲೇ ಆದೇಶ ಹೊರಡಿಸಲಾಗುವುದು.

ಸಂತ್ರಸ್ತರಿಗೆ ಸೂಕ್ತ ಪರಿಹಾರ ವಿತರಣೆಗೆ ಅಗತ್ಯವಿರುವ ಪ್ರಕ್ರಿಯೆ ಇದೀಗ ಪ್ರಗತಿಯಲ್ಲಿದೆ ಎಂದು ಹೇಳಿದರು. ಗದ್ದೆ ಮತ್ತು ತೋಟಗಳಲ್ಲಿ ಮರಳು ಶೇಖರಣೆ ಕುರಿತು ಸಂಬಂಧಿಸಿದವರಿಂದ ವಿವರ ಪಡೆದು ಮುಂದೆ ಅಗತ್ಯ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿರುವುದಾಗಿ ಸಿ.ಕೆ. ಬೋಪಣ್ಣ ತಿಳಿಸಿದ್ದಾರೆ.

ನಿಯೋಗದಲ್ಲಿ ಜಿಲ್ಲಾ ಪಂಚಾಯಿತಿ ಹಿರಿಯ ಸದಸ್ಯರಾದ ಮೂಕೊಂಡ ವಿಜು ಸುಬ್ರಮಣಿ, ಮೂಕೊಂಡ ಶಶಿ ಸುಬ್ರಮಣಿ, ಬಿ ಎನ್.ಪ್ರಥ್ಯು, ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಇದ್ದರು.