(ನಿನ್ನೆಯ ಸಂಚಿಕೆಯಿಂದ) ಬೆಟ್ಟದಲ್ಲೂ ಹೋಂಸ್ಟೇ: ಕೊಡಗಿನಲ್ಲಿ ಪ್ರವಾಸೋದ್ಯಮದ ಹೊಸ ಮೈಲಿಗಲ್ಲು ಹೋಂಸ್ಟೇ, ಎಸ್ಟೇಟ್‍ಸ್ಟೇ ಮತ್ತು ರೆಸಾರ್ಟ್‍ಗಳು. ಇತ್ತೀಚಿನ ದಿನಗಳಲ್ಲಿ ಬೆಟ್ಟದ ತುತ್ತತುದಿಯಲ್ಲಿ ಹೋಂಸ್ಟೇ, ಎಸ್ಟೇಟ್‍ಸ್ಟೇ ಮತ್ತು ರೆಸಾರ್ಟ್‍ಗಳು ನಾಯಿಕೊಡೆಯಂತೆ ತಲೆಯೆತ್ತಿರುವುದನ್ನು ಕಾಣಬಹದು. ಇಂದು ಕೊಡಗಿನ ಯಾವುದೇ ಭಾಗದಲ್ಲಿ ನಿಂತು ನೋಡಿದರೆ ಕಾಣುವ ಸಾಮಾನ್ಯ ದೃಶ್ಯ ಹತ್ತಾರು ಕಿಲೋಮಿಟರ್ ದೂರದ ಬೆಟ್ಟದ ತುದಿಯಲ್ಲಿ, ಬೆಟ್ಟದ ಮೇಲೆ, ಬಂಡೆಯ ಮೇಲೆ ನಿರ್ಮಿಸಿರುವ ಕಟ್ಟಡ. ಇದರ ಸೌಂದರ್ಯವನ್ನು ಸವಿಯಲು ನಗರದ ಐಟಿಬಿಟಿ ಕಂಪೆನಿಯಲ್ಲಿ ಕೆಲಸ ಮಾಡುವ ಯುವಕ-ಯುವತಿಯರು ಮೋಜು-ಮಸ್ತಿಗಾಗಿ ಬರುವುದು. ಇಲ್ಲಿನ ಜನರಿಗೆ ಇದು ಸುಲಭವಾಗಿ ಹಣ ಸಂಪಾದಿಸುವ ಒಂದು ದಂಧೆಯಾಗಿದೆ. ಇದರ ಭೀಕರತೆ ಎಷ್ಟರಮಟ್ಟಿಗೆ ಇದೆ ಎಂದರೆ ನಗರ ಪ್ರದೇಶದಲ್ಲಿ ವಾಸಿಸಲು ಬಾಡಿಗೆ ಮನೆಗಳು ದೊರೆಯದಂತಾಗಿದೆ. ದುರ್ಗಮ ಪ್ರದೇಶದಲ್ಲಿ ಹೋಂಸ್ಟೇ, ಎಸ್ಟೇಟ್‍ಸ್ಟೇ ಮತ್ತು ರೆಸಾರ್ಟ್‍ಗಳ ನಿರ್ಮಾಣ ಭೂಕುಸಿತಕ್ಕೆ ಪ್ರಮುಖ ಕಾರಣವಾಗಿದೆ.

ಕೃಷಿಯೇತರ ಭೂಮಿಯಾಗಿ ಪರಿವರ್ತನೆ: ಕೊಡಗು ಕೃಷಿಕರ ನಾಡು. ಕೃಷಿ ಜನರ ಮೂಲ ಕಸುಬು. ಕೃಷಿ ಮಾಡಿಕೊಂಡು ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದರು ಕೊಡಗಿನವರು. ಆದರೆ ಇಂದು ಕಾಲ ಬದಲಾಗಿದೆ. ತಮ್ಮ ಬಳಿ ಇರುವ ಕೃಷಿ ಭೂಮಿಯನ್ನು ಹೊರ ರಾಜ್ಯಗಳ ಶ್ರೀಮಂತ ವ್ಯಕ್ತಿಗಳಿಗೆ, ಅಕ್ರಮವಾಗಿ ಹಣ ಸಂಪಾದಿಸಿರುವ ರಾಜಕಾರಣಿಗಳಿಗೆ, ಸಿನಿಮಾ ತಾರೆಯರಿಗೆ, ಅಧಿಕಾರಿಗಳಿಗೆ ಮಾರಾಟ ಮಾಡಿ ನಂತರ ನಗರ ಪ್ರದೇಶಕ್ಕೆ ಹೋಗಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಇಂದು ಬಹಳ ವೇಗವಾಗಿ ಹಳ್ಳಿಯ ಕೃಷಿ ಭೂಮಿ ಕೃಷಿಯೇತರ ಭೂಮಿಯಾಗಿ ಮತ್ತು ಪಾಳು ಭೂಮಿಯಾಗಿ ಪರಿವರ್ತನೆಯಾಗುತ್ತಿದೆ. ಕೊಡಗಿನಲ್ಲಿ ಭೂಕುಸಿತ ಮತ್ತು ಪ್ರವಾಹಕ್ಕೆ ಇದು ಪ್ರಮುಖ ಕಾರಣವಾಗಿದೆ.

ಆಧುನಿಕ ಕೃಷಿ ಪದ್ಧತಿ: ಪ್ರತಿಯೊಬ್ಬ ಮನುಷ್ಯನೂ ಬಹಳ ಬೇಗನೆ ಹಣ ಸಂಪಾದಿಸಿ ಶ್ರೀಮಂತರಾಗಬೇಕು ಎಂಬ ಕನಸು ಕಾಣುತ್ತಿದ್ದಾನೆ. ಅದಕ್ಕಾಗಿ ಹಳ್ಳಿಯಲ್ಲಿ ಆಧುನಿಕ ಯಾಂತ್ರಿಕ ಕೃಷಿಯ ಕಡೆಗೆ ಜನ ವಾಲುತ್ತಿರುವುದನ್ನು ಕಾಣಬಹುದು. ಕೃಷಿ ಕಾರ್ಯದಲ್ಲಿ ಯಂತ್ರೋಪಕರಣಗಳ ಬಳಕೆ, ರಸಗೊಬ್ಬರದ ಬಳಕೆ, ಕಳೆನಾಶಕದ ಬಳಕೆ ಸಾಮಾನ್ಯವಾಗಿದೆ. ಇದರಿಂದಾಗಿ ಭೂಮಿಗೆ ಮಣ್ಣನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇಲ್ಲದಂತಾಗಿದೆ. ಹಾಗಾಗಿ ಬಹಳ ಬೇಗ ಸಣ್ಣ ಪ್ರಮಾಣದ ಮಳೆಗೆ ಕೃಷಿ ಭೂಮಿ ಮತ್ತು ಬೆಟ್ಟಗಳು ಕುಸಿಯುತ್ತಿದೆ.

ಪಶ್ಚಿಮ ಘಟ್ಟಗಳ ಸಂರಕ್ಷಣೆಯ ವೈಫಲ್ಯತೆ: ಪಶ್ಚಿಮ ಘಟ್ಟ ಭಾರತದ ಸಂಪತ್ತು. ಜೀವವೈವಿಧ್ಯತೆಯ ತಾಣ. ಆದರೆ ಇಂದು ಪಶ್ಚಿಮ ಘಟ್ಟ ಪ್ರದೇಶಗಳು ಅಪಾಯದ ಅಂಚಿನಲ್ಲಿವೆ. ಸರಕಾರ ಪಶ್ಚಿಮ ಘಟ್ಟದ ಉಳಿವಿಗಾಗಿ ಹಲವಾರು ಪರಿಸರ ತಜ್ಞರುಗಳ ವರದಿಯನ್ನು ರಚಿಸಿದೆ. ಆದರೆ ಕೆಲವೊಂದು ಸ್ವಹಿತಾಸಕ್ತಿಯಿಂದಾಗಿ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರುವಲ್ಲಿ ಸರಕಾರ ವಿಫಲವಾಗಿದೆ. ಇದರಿಂದಾಗಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಬರುವ ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮೊದಲಾದ ಜಿಲ್ಲೆಗಳು ಅಪಾಯವನ್ನು ಎದುರಿಸುವಂತಾಗಿದೆ ಎಂಬದನ್ನು ಮರೆಯುವಂತಿಲ್ಲ.

ಬಫರ್ ಝೋನ್ ನಿಯಮಗಳ ಉಲ್ಲಂಘನೆ: ಪರಿಸರದ ಸಂರಕ್ಷಣೆಗಾಗಿ ಸರಕಾರ ಬಫರ್ ಝೋನ್ ನಿಯಮಗಳನ್ನು ರೂಪಿಸಿದೆ. ಆದರೆ ಇಂದು ಬಫರ್ ಝೋನ್ ನಿಯಮಗಳನ್ನು ಉಲ್ಲಂಘಿಸಿ ನದಿ ದಡಗಳ ಒತ್ತುವರಿ, ಕೆರೆಗಳ ಅತಿಕ್ರಮಣ, ಜಲಮೂಲಗಳ ಬದಲಾವಣೆ ಮತ್ತು ತಿರುಗಿಸಿರುವುದು, ರಾಜಕಾಲುವೆಗಳನ್ನು ನುಂಗಿ ನೂತನ ಬಡಾವಣೆಗಳ ನಿರ್ಮಾಣ ಮತ್ತು ಮಿತಿಮೀರಿದ ಕಾಂಕ್ರಿಟೀಕರಣದಿಂದಾಗಿ ನಗರ ಪ್ರದೇಶಗಳು ಕೂಡ ಇಂದು ಪ್ರವಾಹದಿಂದ ತತ್ತರಿಸಿದೆ.

ಭೂಮಿ ತಾಯಿ ತುಂಬ ಸಹನಾಶೀಲಳು. ಸ್ವಾರ್ಥ ಜೀವಿ ಮನುಷ್ಯ, ಭೂಮಿ ತಾಯಿಯನ್ನು ಬಹಳ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾನೆ. ಭೂಮಿಯ ಮೇಲೆ ಬೇಡ ಎಂದು ಎಸೆಯುವ ಪ್ರತಿಯೊಂದು ವಸ್ತುವನ್ನು ಮಣ್ಣು ಮಾಡುವ ವಿಶೇಷ ಶಕ್ತಿ ಭೂಮಿ ತಾಯಿಗೆ ಇದೆ. ಭೂಮಿಯ ಮೇಲೆ ಮನುಷ್ಯನ ಅತಿಕ್ರಮಣ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿರುವುದರಿಂದ ನಮಗೆ ಇಂದು ಇಂತಹ ದುರ್ಗತಿ ಬಂದಿದೆ ಎಂದರೆ ತಪ್ಪಾಗಲಾರದು.

ಮನುಷ್ಯ ಪರಿಸರದ ಕೂಸು. ನಮ್ಮ ಅಸ್ತಿತ್ವ ಭೂಮಿಯನ್ನು ಅವಲಂಬಿಸಿದೆ. ನಾವು ಭೂಮಿಯ ಮೇಲೆ ಜೀವಂತವಾಗಿರುವುದು ಭೂಮಿ ತಾಯಿಯ ಕರುಣೆಯಿಂದ. ನಮ್ಮ ಸುಂದರವಾದ ಪರಿಸರವನ್ನು ಕಾಪಾಡಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ನಮ್ಮ ಸ್ವಾರ್ಥವನ್ನು ಬಿಟ್ಟು ಪರಿಸರದ ಸಂರಕ್ಷಣೆಯ ಕಡೆಗೆ ಗಮನವಹಿಸಿದರೆ ಖಂಡಿತವಾಗಿ ಭೂಮಿ ತಾಯಿ ಶಾಂತವಾಗಿ ಇಂತಹ ದುರಂತಗಳಿಂದ ನಮ್ಮನ್ನು ರಕ್ಷಿಸುತ್ತಾಳೆ. ಪರಿಸರವನ್ನು ರಕ್ಷಿಸಿ ಮುಂದಿನ ಪೀಳಿಗೆಗೂ ಈ ಸುಂದರ ಪರಿಸರ ದೊರೆಯುವಂತೆ ಮಾಡೋಣ. ಮನುಷ್ಯರಂತೆ ವನ್ಯ ಜೀವಿಗಳ ಸಂರಕ್ಷಣೆಯ ಕಡೆಗೂ ಗಮನ ಹರಿಸೋಣ. ನಮ್ಮ ಮುಂದಿರುವ ದುರ್ಗತಿಗಳನ್ನು ತಡೆಯೋಣ. ನೆಮ್ಮದಿಯ ಜೀವನಕ್ಕೆ ಅಡಿಪಾಯವನ್ನಿಡೋಣ.

(ಮುಗಿಯಿತು)

- ಡಾ. ಕೆ.ಸಿ. ದಯಾನಂದ ಸಹಾಯಕ ಪ್ರಾಧ್ಯಾಪಕರು, ಅರ್ಥಶಾಸ್ತ್ರ ವಿಭಾಗ,

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಡಿಕೇರಿ. ಮೊ. 9449766772.