ಮಡಿಕೇರಿ, ಆ. 26: ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರ ಜಾರಿಗೊಳಿಸುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕೊಡಗು ಜಿಲ್ಲಾ ಪಂಚಾಯಿತಿಗೆ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕಗೊಂಡಿರುವ ಭಂವರ್ ಸಿಂಗ್ ಮೀನಾ ಹೇಳಿದರು.ಇಂದು ಜಿಲ್ಲಾ ಪಂಚಾಯಿತಿ ಭವನದಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಂದ ಅಧಿಕಾರ ಸ್ವೀಕರಿಸಿದ ಬಳಿಕ (ಮೊದಲ ಪುಟದಿಂದ) ‘ಶಕ್ತಿ’ಯೊಂದಿಗೆ ಅವರು ಮಾತನಾಡಿದರು. ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿಯನ್ನು ಇಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಪಡೆದುಕೊಳ್ಳಲು ತಾನು ಮೊದಲ ಆದ್ಯತೆ ನೀಡಲಿದ್ದು, ನಂತರ ಇಲ್ಲಿನ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದರ ಜೊತೆಗೆ ಇಲ್ಲಿನ ಸಮಸ್ಯೆಗಳ ಪರಿಹಾರಕ್ಕೂ ಮುಂದಾಗುವುದಾಗಿ ನುಡಿದರು.ರಾಜಸ್ಥಾನ ಮೂಲದವರಾದ ಭಂವರ್ ಸಿಂಗ್ ಮೀನಾ ಬೆಳಗಾವಿ ಜಿಲ್ಲೆಯಲ್ಲಿ ಪ್ರೊಬೇಷನರಿ ಅವಧಿ ಪೂರ್ಣಗೊಳಿಸಿ ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಉಪ ವಿಭಾಗಾಧಿಕಾರಿಯಾಗಿದ್ದರು. ಈ ಹಿಂದೆ ಐಪಿಎಸ್ ಉತ್ತೀರ್ಣಗೊಂಡು ತರಬೇತಿ ಪಡೆದಿದ್ದ ಇವರು, ನಂತರ ಐಎಎಸ್ ಪರೀಕ್ಷೆ ಪೂರ್ಣಗೊಳಿಸಿದ್ದು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವ್ಯಾಸಂಗ ಮಾಡಿದ್ದಾರೆ. ಸಿಇಓ ಅಧಿಕಾರ ಸ್ವೀಕಾರ ಸಂದರ್ಭ ಎಸ್ಪಿ ಕ್ಷಮಾಮಿಶ್ರಾ, ತಾ.ಪಂ. ಸಿಇಓ ಲಕ್ಷ್ಮಿ ಇತರರಿದ್ದರು.