ಗೋಣಿಕೊಪ್ಪ ವರದಿ, ಆ. 26: ಅರ್ಜಿಯಲ್ಲಿನ ಲೋಪ ಸರಿಪಡಿಸಲು ಬೆಳೆನಷ್ಟ ಪರಿಹಾರ ಕೋರಿ ನೀಡುವ ಅರ್ಜಿಯನ್ನು ಬೆಳೆಗಾರರು ನೇರವಾಗಿ ಅಧಿಕಾರಿಗಳಿಗೆ ನೀಡುವಂತೆ ವೀರಾಜಪೇಟೆ ತಾಲೂಕು ಬಿಜೆಪಿ ಕೃಷಿ ಮೋರ್ಚಾ ಅಧ್ಯಕ್ಷ ಕಟ್ಟೇರ ಈಶ್ವರ ಬೆಳಗಾರರಲ್ಲಿ ಮನವಿ ಮಾಡಿದ್ದಾರೆ.
ಖಾಸಗಿ ಸಂಘ-ಸಂಸ್ಥೆಗಳ ಮೂಲಕ ಅರ್ಜಿಯನ್ನು ಸಲ್ಲಿಸುವು ದರಿಂದ ಅರ್ಜಿಯಲ್ಲಿನ ಲೋಪ ಪತ್ತೆ ಹಚ್ಚಲು ವಿಳಂಬವಾಗುತ್ತದೆ. ಇದರಿಂದ ಪರಿಹಾರದಿಂದ ವಂಚಿತರಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಸಂಘ-ಸಂಸ್ಥೆಗಳ ಮೂಲಕ ವೈಯಕ್ತಿಕ ಪರಿಹಾರದ ಅರ್ಜಿ ನೀಡಬೇಡಿ ಎಂದು ಸುದ್ದಿಗೋಷ್ಠಿಯಲ್ಲಿ ಕೋರಿದರು.
ಬೆಳೆಗಾರರು ನೇರವಾಗಿ ಅರ್ಜಿಯನ್ನು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಿದರೆ ಪರಿಹಾರ ವಿಳಂಬವಾದಲ್ಲಿ ಲೋಪಗಳನ್ನು ಸರಿಪಡಿಸಲು ಸಹಾಯವಾಗಲಿದೆ. ಪರಿಹಾರ ವಿಳಂಬವಾದ ಸಂದರ್ಭದಲ್ಲಿ ಬೆಳೆಗಾರರ ಪರವಾಗಿ ಕೃಷಿ ಮೋರ್ಚಾ ಹೋರಾಟಕ್ಕೆ ಸಿದ್ಧವಿದೆ ಎಂದು ಹೇಳಿದರು.
ಈ ಹಿಂದೆ ಮಳೆಯಿಂದ ಕಾಫಿ ಬೆಳೆಗಾರರು ನಷ್ಟ ಅನುಭವಿಸಿದ್ದ ಸಂದರ್ಭ ಎಕರೆಗೆ ರೂ. 7500 ಪರಿಹಾರ ಸಿಕ್ಕಿರುವುದು ಹೆಚ್ಚಿನ ಪ್ರಯೋಜನವಾಗಿಲ್ಲ. ಕಾಫಿ ಬೆಳೆಯಲು ಎಕರೆಯೊಂದಕ್ಕೆ ರೂ. 50000 ವೆಚ್ಚ ಮಾಡಬೇಕಿರುವ ಸಂದರ್ಭದಲ್ಲಿ ಅಲ್ಪಮೊತ್ತದ ಪರಿಹಾರ ಸಾಕಾಗುವುದಿಲ್ಲ. ಅಲ್ಲದೆ, ಹೆಚ್ಚು ಮಳೆಯ ಕಾರಣ ಇಳುವರಿ ಕುಂಠಿತವಾಗಿದೆ. ಪ್ರತಿ ಎಕರೆಗೆ 25 ಸಾವಿರ ಪರಿಹಾರ ನೀಡಿದರೆ ಬೆಳೆಗಾರನಿಗೆ ನಷ್ಟವಾಗುವುದನ್ನು ತಪ್ಪಿಸಬಹುದಾಗಿದೆ ಎಂದರು.
ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಲು ಕಾಫಿ ಮಂಡಳಿ ವಿಫಲವಾಗಿದೆ ಎಂದು ಆರೋಪಿಸಿದ ಅವರು ಮಂಡಳಿಯಿಂದ ಬೆಳೆಗಾರ ರಿಗೆ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ. ಕಾಫಿ ಮಂಡಳಿ ಹೆಸರಿಗಷ್ಟೆ ಸೀಮಿತವಾಗಿದೆ. ಕಾಫಿ ಬೆಳೆಗಾರರು ತಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂಬುದು ಅರ್ಥವಾಗುತ್ತಿಲ್ಲ ಎಂದರು.
ಬೆಳೆಗಾರರ ಸಮಸ್ಯೆಗಳಿಗೆ ಶಾಸಕರು ಸ್ಪಂದಿಸಿ ಹೆಚ್ಚಿನ ಪರಿಹಾರಕ್ಕಾಗಿ ಪ್ರಯತ್ನ ಮುಂದುವರೆಸುವುದಾಗಿ ಭರವಸೆ ನೀಡಿದ್ದಾರೆ. ಸಂಸದ ಪ್ರತಾಪ್ ಸಿಂಹ ಅವರನ್ನು ಭೇಟಿಯಾಗಿ ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡಲಾಗುವುದು ಎಂದರು.
ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ವಿನು, ಸದಸ್ಯ ಪವನ್, ಸಾಮಾಜಿಕ ಜಾಲತಾಣ ಸದಸ್ಯ ಚೆಟ್ಟಂಗಡ ಮಹೇಶ್ ಇದ್ದರು.