ಸಿದ್ದಾಪುರ, ಆ. 26: ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ಇಂಜಿಲಗೆರೆಯ ಪುಲಿಯೇರಿ ಗ್ರಾಮದಲ್ಲಿ ಇದೀಗ ಚಿರತೆಗಳು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇಂಜಿಲಗೆರೆ ಪುಲಿಯೇರಿ ಗ್ರಾಮದ ಕಾಫಿ ತೋಟಗಳಲ್ಲಿ ಕಳೆದ ಕೆಲವು ತಿಂಗಳಿನಿಂದ ಕಾಡಾನೆಗಳು ಬೀಡುಬಿಟ್ಟಿದ್ದು, ದಾಂಧಲೆ ನಡೆಸುತ್ತಿದ್ದವು. ಇದೀಗ ಕಾಫಿ ತೋಟಗಳಲ್ಲಿ ಚಿರತೆಗಳು ಕಂಡು ಬಂದಿದ್ದು, ಬುಧವಾರದಂದು ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳಿದ ಕಾರ್ಮಿಕರು ಒಂದು ದೊಡ್ಡ ಚಿರತೆಯೊಂದಿಗೆ ಸಣ್ಣ ಚಿರತೆಯೊಂದು ಕಾಫಿ ತೋಟದಲ್ಲಿ ಸುತ್ತಾಡುತ್ತಿರುವುದನ್ನು ಕಂಡು ಭಯಭೀತರಾಗಿದ್ದರು. ಈ ಬಗ್ಗೆ ಕಾರ್ಮಿಕರು ತೋಟದ ಮಾಲೀಕರಿಗೆ ಮಾಹಿತಿ ನೀಡಿ ಕೆಲಸಕ್ಕೆ ತೆರಳದೇ ಆತಂಕದಿಂದ ಮನೆಗೆ ತೆರಳಿದರು. ಕೂಡಲೇ ಈ ಬಗ್ಗೆ ಅರಣ್ಯ ಇಲಾಖಾ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.