ಶ್ರೀಮಂಗಲ, ಆ 26: ಕೋವಿಡ್ 19 ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ಮುನ್ನೆಚ್ಚರಿಕೆಯಿಂದ ಕೊಡಗು-ಕೇರಳ ಗಡಿ ಭಾಗ ಕುಟ್ಟದಲ್ಲಿ ಕಳೆದ ಒಂದು ತಿಂಗಳಿನಿಂದ ಸ್ಥಗಿತವಾಗಿದ್ದ ಸಂತೆಯನ್ನು ಸೆಪ್ಟೆಂಬರ್ 1 ರಿಂದ ಮತ್ತೆ ಆರಂಭಿಸಲು ಕುಟ್ಟ ಪಟ್ಟಣ ಚೇಂಬರ್ ಆಫ್ ಕಾಮರ್ಸ್ ನಿರ್ಧರಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಕುಟ್ಟ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಮುಕ್ಕಾಟೀರ ನವೀನ್ ಅಯ್ಯಪ್ಪ ಅವರು; ಕಳೆದ ಒಂದು ತಿಂಗಳಿನಿಂದ ಕುಟ್ಟದಲ್ಲಿ ವಾರದ ಮಂಗಳವಾರ ನಡೆಯುತ್ತಿದ್ದ ಸಂತೆಯನ್ನು ಚೇಂಬರ್ ಆಫ್ ಕಾಮರ್ಸ್ನ ಸರ್ವ ಸದಸ್ಯರ ಸಮ್ಮತಿಯೊಂದಿಗೆ ಒಂದು ತಿಂಗಳ ಕಾಲ ಸ್ಥಗಿತ ಮಾಡಲಾಗಿತ್ತು. ಇದನ್ನು ಮತ್ತೆ ತೆರೆಯಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಕುಟ್ಟದ ಮೂಲಕ ಕೇರಳಕ್ಕೆ ಕೊಡಗಿನ ವಾಹನಗಳನ್ನು ಪ್ರವೇಶಿಸಲು ಕೇರಳದ ಗೇಟಿನಲ್ಲಿ ಬಿಡುತ್ತಿಲ್ಲ. ಆದರೆ ಕೇರಳದಿಂದ ಕೊಡಗಿಗೆ ಎಲ್ಲಾ ರೀತಿಯ ವಾಹನಗಳು ಪ್ರವೇಶಿಸುತ್ತಿವೆ. ಕೊಡಗಿಗೆ ಖಾಸಗಿ ಪ್ರಯಾಣಿಕರ ವಾಹನ, ಸರಕು ವಾಹನ ಮತ್ತು ಲಾರಿಗಳು ಸಹ ಪ್ರವೇಶಿಸುತ್ತಿವೆ. ಆದರೆ ಕೇರಳಕ್ಕೆ ಪ್ರವೇಶಿಸಲು ಕುಟ್ಟ ಗೇಟಿನಲ್ಲಿ ಅವಕಾಶ ನಿರಾಕರಿಸಲಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಯವರು ಕೇರಳ ಸರಕಾರ ಅಥವಾ ಕೇರಳದ ವಯನಾಡ್ ಜಿಲ್ಲಾಧಿಕಾರಿಯೊಂದಿಗೆ ಸಮಾಲೋಚನೆ ನಡೆಸಿ ಕೊಡಗು ಜಿಲ್ಲೆಯ ವಾಹನ ಕೇರಳ ಪ್ರವೇಶಿಸಲು ಅವಕಾಶ ಕಲ್ಪಿಸಬೇಕೆಂದು ಅಧ್ಯಕ್ಷ ನವೀನ್ ಮನವಿ ಮಾಡಿದ್ದಾರೆ.