ವಿದೇಶಿ ಕಂಪೆನಿಗಳ ನೇರ ಹೂಡಿಕೆ
ಬೆಂಗಳೂರು, ಆ. 26: ಹೆಚ್ಚಿನ ಆರ್ಥಿಕ ಪ್ರಗತಿ ಸಾಧಿಸುವ ಉದ್ದೇಶದಿಂದ ಎಲ್ಲಾ ಕ್ಷೇತ್ರಗಳಲ್ಲಿ ವಿದೇಶಿ ಕಂಪೆನಿಗಳ ನೇರ ಹೂಡಿಕೆಯನ್ನು ರಾಜ್ಯ ಸರ್ಕಾರ ಉತ್ತೇಜಿಸುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಇಂಡಿಯನ್ ಚೇಂಬರ್ರ್ ಆಫ್ ಕಾಮರ್ಸ್ ಬುಧವಾರ ಆಯೋಜಿಸಿದ್ದ ಇಂಡೋ-ಜಪಾನಿಸ್ ಬಿಸಿನೆಸ್ ಫೆÇೀರಂನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಪಾನಿನ ಕಂಪೆನಿಗಳಿಂದ ನೇರ ಹೂಡಿಕೆಗೆ ಎಲ್ಲಾ ರೀತಿಯ ಸಹಕಾರ ಒದಗಿಸುವುದಾಗಿ ಭರವಸೆ ನೀಡಿದರು. ಅಲ್ಲದೆ, ಹೂಡಿಕೆಗೆ ಕರ್ನಾಟಕ ಸೂಕ್ತ ಸ್ಥಳ ಹೇಗೆ ಮತ್ತು ಅದಕ್ಕಾಗಿ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳೇನು ಎಂಬುದನ್ನು ಜಪಾನಿ ನಿಯೋಗಕ್ಕೆ ಮನವರಿಕೆ ಮಾಡಿಕೊಟ್ಟರು. ಉದ್ಯಮ ಕ್ಷೇತ್ರದಲ್ಲಿ ಕರ್ನಾಟಕ ಮತ್ತು ಜಪಾನ್ ನಡುವಿನ ಔದ್ಯಮಿಕ ಸಂಬಂಧ ಉತ್ತಮವಾಗಿದೆ. ವಿಶೇಷವಾಗಿ, ಜಪಾನ್‍ಗೆ ಸಂಬಂಧಿಸಿದಂತೆ, ತುಮಕೂರಿನ ವಸಂತನರಸಪುರದಲ್ಲಿ ಜಪಾನೀಸ್ ಕೈಗಾರಿಕಾ ಟೌನ್ ಶಿಪ್ ಸ್ಥಾಪಿಸಲಾಗಿದೆ ಎಂದು ಹೇಳಿದ್ದಾರೆ.
ಕೇರಳದಲ್ಲಿ ದಾಖಲೆ ಸಂಖ್ಯೆಯ ಸೋಂಕಿತರು
ಕೊಚ್ಚಿ, ಆ. 26: ಮಾರಕ ಕೊರೊನಾ ಸೋಂಕು ಕೇರಳದಲ್ಲಿ ಸಂಪೂರ್ಣ ನಿಯಂತ್ರಣದಲ್ಲಿದೆ ಎನ್ನುವಾಗಲೇ ಮತ್ತೆ ಸೋಂಕು ತನ್ನ ಆರ್ಭಟ ಮುಂದುವರೆಸಿದ್ದು, ಇಂದು ಹೊಸ ಸೋಂಕಿತರ ಸಂಖ್ಯೆಯಲ್ಲಿ ದಾಖಲೆ ಬರೆದಿದೆ. ಕೇರಳದಲ್ಲಿ ಇಂದು ಒಂದೇ ದಿನ 2476 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಇದು ಕೇರಳದಲ್ಲಿ ದಾಖಲಾದ ಈವರೆಗಿನ ಒಂದು ದಿನದ ಗರಿಷ್ಠ ಸೋಂಕು ಪ್ರಕರಣಗಳಾಗಿವೆ. ಆ ಮೂಲಕ ಕೇರಳದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 66,831ಕ್ಕೆ ಏರಿಕೆಯಾಗಿದೆ. ಈ ಪೈಕಿ ಕಳೆದ 24 ಗಂಟೆಗಳಲ್ಲಿ 1351 ಸೋಂಕಿತರು ಗುಣಮುಖರಾಗಿದ್ದು, ಆ ಮೂಲಕ ಕೇರಳದಲ್ಲಿ ಗುಣಮುಖರಾದ ಒಟ್ಟಾರೆ ಸೋಂಕಿತರ ಸಂಖ್ಯೆ 41,694ಕ್ಕೆ ಏರಿಕೆಯಾಗಿದೆ. ಕೇರಳದಲ್ಲಿ ಪ್ರಸ್ತುತ 22,344 ಸಕ್ರಿಯ ಪ್ರಕರಣಗಳಿವೆ. ಅಂತೆಯೇ ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ ಒಟ್ಟು 13 ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ಕೇರಳದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 270ಕ್ಕೆ ಏರಿಕೆಯಾಗಿದೆ.
ಅಧಿಕಾರಿಗಳ ನಿವಾಸದ ಮೇಲೆ ದಾಳಿ
ಬೆಂಗಳೂರು, ಆ. 26: ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ಬೆಂಗಳೂರು ಮತ್ತು ಮೈಸೂರಿನಲ್ಲಿ ಸರ್ಕಾರಿ ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ. ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿ ದೂರು ದಾಖಲಾದ ಹಿನ್ನೆಲೆ ಮೈಸೂರು ಅಭಿವೃದ್ಧಿ ಅಧಿಕಾರಿ ನಾಗರಾಜು ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಎಂಎಸ್‍ಎನ್ ಬಾಬು ನಿವಾಸದ ಮೇಲೆ ದಾಳಿ ನಡೆದಿದೆ. ಇಬ್ಬರಿಗೆ ಸೇರಿದ ಐದು ಜಾಗದಲ್ಲಿ ಎಸಿಬಿ ದಾಳಿ ನಡೆದಿದೆ. ದಾಳಿ ವೇಳೆ ನಾಗೇಂದ್ರ ಮನೆಯಲ್ಲಿ ರೂ. 9 ಲಕ್ಷ ನಗದು 1.5 ಕೆ.ಜಿ. ಚಿನ್ನ, ಬಾಬು ಮನೆಯಲ್ಲಿ ರೂ. 5 ಲಕ್ಷ ನಗದು 1.5 ಕೆ.ಜಿ. ಚಿನ್ನ ಪತ್ತೆಯಾಗಿದೆ.
ಕಾನೂನು ಪದವಿ ಪರೀಕ್ಷೆ ಮುಂದೂಡಿಕೆ
ಬೆಂಗಳೂರು, ಆ. 26: ಕಾನೂನು ಪದವಿಯ ಪ್ರಥಮ ವರ್ಷದಿಂದ ನಾಲ್ಕನೇ ವರ್ಷದ ಪದವಿವರೆಗಿನ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಕಾನೂನು ಪದವಿ ಅಂತಿಮ ವರ್ಷದ ಪರೀಕ್ಷೆಗಳು ಅಕ್ಟೋಬರ್‍ನಲ್ಲಿ ಅನ್‍ಲೈನ್ ಮೂಲಕ ನಡೆಸಲು ತೀರ್ಮಾನಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ. ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಧುಸ್ವಾಮಿ, ಮುಂದೂಡುವ ಪರೀಕ್ಷೆಗಳಲ್ಲಿ ಪಾಸ್ ಆದರೆ ಮಾತ್ರ ಅದರ ಮುಂದಿನ ಸೆಮಿಸ್ಟರ್‍ಗೆ ಹೋಗಲು ಅವಕಾಶ ನೀಡಲಾಗುವುದು ಎಂದರು. ಈಗಾಗಲೇ ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡುವಂತೆ ಮನವಿ ಮಾಡಿದ್ದರು. ಅದೇ ರೀತಿ ಶಿಕ್ಷಣ ತಜ್ಞರು, ರಾಜಕೀಯ ನಾಯಕರು ಕೂಡ ಇದೇ ಬೇಡಿಕೆ ಇಟ್ಟಿದ್ದರು. ಲಾಕ್‍ಡೌನ್ ಮಾರ್ಚ್‍ನಲ್ಲಿ ಆರಂಭವಾದ ಕಾರಣ ಮೂರು ತಿಂಗಳು ತರಗತಿಗಳು ನಡೆದಿಲ್ಲ. ಹಾಗಾಗಿ ಪರೀಕ್ಷೆಗಳನ್ನು ಮುಂದೂಡುತ್ತಿದ್ದೇವೆ ಎಂದರು.
ಸಂಸತ್ ಭವನದ ಬಳಿ ವ್ಯಕ್ತಿಯ ಬಂಧನ
ನವದೆಹಲಿ, ಆ. 26: ದೆಹಲಿಯ ಸಂಸತ್ ಭವನದ ಬಳಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಜಮ್ಮು-ಕಾಶ್ಮೀರದ ವ್ಯಕ್ತಿಯೋರ್ವನನ್ನು ದೆಹಲಿಯ ಸಿಆರ್‍ಪಿಎಫ್ ಪೆÇಲೀಸರು ಬಂಧಿಸಿದ್ದಾರೆ. ವರದಿಗಳ ಪ್ರಕಾರ ಬಂಧಿತ ವ್ಯಕ್ತಿ ಜಮ್ಮು-ಕಾಶ್ಮೀರದ ಬದ್ಗಾಮ್ ಜಿಲ್ಲೆಯವನಾಗಿದ್ದಾನೆ. ಸಂಸತ್ ಭವನದ ಎದುರು ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಹಿನ್ನೆಲೆ ಆತನನ್ನು ಕರ್ತವ್ಯ ನಿರತ ಸಿಆರ್‍ಪಿಎಫ್ ಸಿಬ್ಬಂದಿ ಬಂಧಿಸಿದ್ದಾರೆ. ಪ್ರಾಥಮಿಕ ವಿಚಾರಣೆ ವೇಳೆ ಪೆÇಲೀಸರಿಗೆ ಈ ವ್ಯಕ್ತಿ ತನ್ನ ಬಗ್ಗೆ ದಾರಿ ತಪ್ಪಿಸುವ ಮಾಹಿತಿ ನೀಡಿದ್ದಾನೆ. ಆತನಿಂದ ವಶಪಡಿಸಿಕೊಂಡ ವಸ್ತುಗಳ ಪೈಕಿ ಕೋಡ್ ವರ್ಡ್‍ಗಳನ್ನು ಹೊಂದಿದ ಮಾಹಿತಿಯೊಂದು ಲಭ್ಯವಾಗಿದೆ. ಬಂಧಿತ ವ್ಯಕ್ತಿಯಿಂದ ಎರಡು ಐಡಿ ಕಾರ್ಡ್‍ಗಳು, ಒಂದು ಆಧಾರ್ ಕಾರ್ಡ್ ಹಾಗೂ ವಾಹನ ಚಾಲನೆ ಪರವಾನಗಿಯನ್ನೂ ವಶಪಡಿಸಿಕೊಳ್ಳಲಾಗಿದೆ.
ಬಸ್‍ಗಳ ನಡುವೆ ಡಿಕ್ಕಿ : 6 ಸಾವು
ಲಕ್ನೋ, ಆ. 26: ಮುಂದೆ ಚಲಿಸುತ್ತಿದ್ದ ಟ್ರಕ್ ಹಿಂದಕ್ಕೆ ಹಾಕುವ ಭರದಲ್ಲಿ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದ ಎರಡು ಬಸ್‍ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಕನಿಷ್ಟ 6 ಮಂದಿ ಪ್ರಯಾಣಿಕರು ಮೃತಪಟ್ಟು, ಇತರ 20 ಮಂದಿ ಗಾಯಗೊಂಡಿರುವ ದುರ್ಘಟನೆ ಲಕ್ನೋ-ಹರದೋಯ್ ರಾಜ್ಯ ಹೆದ್ದಾರಿಯ ಬಜನ್ ಗರ್ ಸಮೀಪ ಬುಧವಾರ ಬೆಳಿಗ್ಗೆ ಸಂಭವಿಸಿದೆ. ಅಪಘಾತಕ್ಕೀಡಾಗಿರುವ ಎರಡೂ ಬಸ್‍ಗಳು ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ್ದಾಗಿವೆ. ಮುಂದೆ ಚಲಿಸುತ್ತಿದ್ದ ಟ್ರಕ್ ಹಿಂದೆ ಹಾಕಲು ಬಸ್ಸೊಂದು ಪ್ರಯತ್ನಿಸಿದಾಗ ಈ ಅಪಘಾತ ಸಂಭವಿಸಿದೆ. ಬಸ್ ಹಿಂದೆ ಹಾಕಿದ್ದ ಟ್ರಕ್ ಸಹ ಬಸ್‍ಗಳಿಗೆ ಡಿಕ್ಕಿ ಹೊಡೆದಿದೆ ಎಂದು ಪೆÇಲೀಸರು ಹೇಳಿದ್ದಾರೆ. ಅಪಘಾತದಲ್ಲಿ ಮೃತ ಪಟ್ಟವರನ್ನು ನಿತೀಶ್ ಭಾರತಿ, ಲಕ್ಕಿ ಸಕ್ಸೇನಾ, ಸರ್ವಘರ್, ಹರಿರಾಂ ಹಾಗೂ ಮಹಿಳೆಯೊಬ್ಬರ ಗುರುತು ಸಿಕ್ಕಿಲ್ಲ ಎಂದು ನಗರ ಹೆಚ್ಚುವರಿ ಪೆÇಲೀಸ್ ಆಯುಕ್ತ ಎಸ್.ಎಂ. ಕಾಸಿಂ ತಿಳಿಸಿದ್ದಾರೆ.
ಎಸ್.ಪಿ. ಬಾಲಸುಬ್ರಮಣ್ಯಂ ಚೇತರಿಕೆ
ಚೆನ್ನೈ, ಆ. 26: ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಅವರ ಆರೋಗ್ಯದ ಬಗ್ಗೆ ಅವರ ಪುತ್ರ ಎಸ್‍ಪಿಬಿ ಚರಣ್ ಮಾಹಿತಿ ನೀಡಿದ್ದು, ಎಸ್‍ಪಿಬಿ ಚೇತರಿಸಿಕೊಳ್ಳುತ್ತಿರುವುದನ್ನು ತಿಳಿಸಿದ್ದಾರೆ. ವೈದ್ಯರೊಂದಿಗೆ ಮಾತನಾಡಿದೆ, ನಮ್ಮ ತಂದೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಸೆಡೆಶನ್‍ನಿಂದ ಶೇ. 90 ರಷ್ಟು ಹೊರಬಂದಿದ್ದಾರೆ. ಚೇತರಿಸಿಕೊಳ್ಳುತ್ತಿದ್ದಾರೆ. ವೈದ್ಯರು ಹಾಗೂ ಚಿಕಿತ್ಸೆಗೆ ಅವರು ಸ್ಪಂದಿಸುತ್ತಿದ್ದಾರೆ. ನಮ್ಮ ತಂದೆಯ ಆರೋಗ್ಯ ಚೇತರಿಕೆಗೆ ಪ್ರಾರ್ಥಿಸಿದ ಎಲ್ಲರ ಪ್ರೀತಿ, ಪ್ರಾರ್ಥನೆಗಳಿಗೆ, ಎಂಜಿಎಂ ಆಸ್ಪತ್ರೆಯ ತಂಡಕ್ಕೆ ನಮ್ಮ ಕುಟುಂಬ ಕೃತಜ್ಞರಾಗಿದೆ ಎಂದು ಚರಣ್ ತಿಳಿಸಿದ್ದಾರೆ. ಗುಣಮುಖರಾಗಿರುವ ನಮ್ಮ ತಂದೆಯನ್ನು ನಾವು ಆದಷ್ಟು ಬೇಗ ನೋಡುತ್ತೇವೆ ಎಂಬ ವಿಶ್ವಾಸವಿದೆ, ಅವರು ಚೇತರಿಸಿಕೊಳ್ಳುತ್ತಿರುವ ಸುದ್ದಿ ಬಂದಿದ್ದು ಅವರ ಆರೋಗ್ಯದ ಬಗ್ಗೆ ಕಳಕಳಿ ಹೊಂದಿದ್ದ ಎಲ್ಲರಿಗೂ ಇದು ಸುದಿನ ಎಂದು ಚರಣ್ ಹೇಳಿದ್ದಾರೆ.
ಮೊದಲ ಕನ್ನಡ ಮೇಯರ್ ನಿಧನ
ಬೆಳಗಾವಿ, ಆ. 26: ಬೆಳಗಾವಿಯ ಮಹಾನಗರ ಪಾಲಿಕೆಯ ಮೊದಲ ಕನ್ನಡ ಮೇಯರ್ ಸಿದ್ಧನಗೌಡ ಪಾಟೀಲ್ (87) ಅವರು ಅನಾರೋಗ್ಯದಿಂದ ಬುಧವಾರ ನಿಧನ ಹೊಂದಿದರು. ಬೆಳಗಾವಿ ಮಹಾನಗರ ಪಾಲಿಕೆಯ ಮೊದಲ ಕನ್ನಡ ಮೇಯರ್ ಎನಿಸಿಕೊಂಡಿದ್ದಂತ ಸಿದ್ದನಗೌಡ ಪಾಟೀಲ (87) ಅವರು ಇಲ್ಲಿನ ಶಿವಬಸವನಗರದ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ. ಬೆಳಗಾವಿ ಜಿಲ್ಲೆ ಬೈಲಹೊಂಗಲದ ಸರಿಗೆ ಮಲ್ಲಾಪುರ ಗ್ರಾಮದ ಕೃಷಿಕ ಕುಟುಂಬವೊಂದರಲ್ಲಿ 1934, ಏಪ್ರಿಲ್ 18 ರಂದು ಸಿದ್ದನಗೌದ ಜನಿಸಿದ್ದರು. ಪ್ರಾಂತ್ಯಗಳ ವಿಂಗಡಣೆ ಸಮಯದಲ್ಲಿ ಬಳ್ಳಾರಿಯನ್ನು ಆಂಧ್ರಪ್ರದೇಶಕ್ಕೆ ಸೇರಿಸಿದ ಸಮಯ ಅಂದಿನ ಪ್ರಧಾನಿ ಜವಹರಲಾಲ್ ನೆಹರು ಬೆಳಗಾವಿಗೆ ಆಗಮಿಸಿದ್ದ ವೇಳೆ ಅವರಿಗೆ ಕಪ್ಪು ಬಾವುಟ ತೋರಿಸಿ ವಿರೋಧ ವ್ಯಕ್ತಪಡಿಸಿದ್ದರು.