ಕುಶಾಲನಗರ, ಆ. 25: ಕೊರೊನಾ ವೈರಸ್ನಿಂದ ಹಲವರು ಜೀವ ಉಳಿಸಿಕೊಂಡು ಜೀವನ ರೂಪಿಸುವ ಚಿಂತನೆಯಲ್ಲಿದ್ದರೆ ಕುಶಾಲನಗರ ಮತ್ತು ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕೆಲವು ಶಾಲಾ ವಿದ್ಯಾರ್ಥಿನಿಯರ ಪೋಷಕರು ಮಾತ್ರ ತಮ್ಮ ಮಕ್ಕಳಿಗೆÀ ವೈವಾಹಿಕ ಜೀವನ ರೂಪಿಸಿಕೊಡುತ್ತಿರುವ ಬಗ್ಗೆ ವರದಿಗಳು ಹೊರಬಿದ್ದಿವೆ.
ಕಳೆದ ಮಾರ್ಚ್ ತಿಂಗಳಿನಿಂದ ಪರೀಕ್ಷೆಯೂ ಇಲ್ಲದೆ ಇತ್ತ ಶಾಲೆಯೂ ಪುನರಾರಂಭಗೊಳ್ಳದೆ ಮನೆಯಲ್ಲಿಯೇ ಬಂಧಿಯಾಗಿರುವ ಪದವಿ ತರಗತಿ ವ್ಯಾಸಂಗದಲ್ಲಿದ್ದ 20 ರಿಂದ 30ಕ್ಕೂ ಅಧಿಕ ವಿದ್ಯಾರ್ಥಿನಿಯರ ಪೋಷಕರು ಶಿಕ್ಷಣವನ್ನು ಬಿಡಿಸಿ ಮದುವೆ ಮಾಡಿಕೊಟ್ಟಿರುವ ಬಗ್ಗೆ ಅಂಕಿಅಂಶಗಳು ಲಭಿಸಿವೆ.
ಕುಶಾಲನಗರದ ಗಡಿಭಾಗದಲ್ಲಿರುವ ಪದವಿ ಕಾಲೇಜೊಂದರ 10ಕ್ಕೂ ಅಧಿಕ ಯುವತಿಯರು ಈಗಾಗಲೆ ಹಸೆಮಣೆಯನ್ನೇರಿದ್ದು, ಕೊರೊನಾ ಕಳೆದ ಸಾಲಿನ ಪ್ರಥಮ, ದ್ವಿತೀಯ ಪದವಿ ಪರೀಕ್ಷೆಗೆ ಅವಕಾಶವನ್ನು ಕಸಿದುಕೊಳ್ಳುವುದರೊಂದಿಗೆ ಅಂತಿಮ ಪದವಿ ಪರೀಕ್ಷೆಗಳು ಕೂಡ ನಡೆಯುವ ಬಗ್ಗೆ ಇನ್ನೂ ತೀರ್ಮಾನವಾಗದ ಹಿನ್ನೆಲೆ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಇನ್ನೂ ಮನೆಯಲ್ಲೇ ಕುಳಿತುಕೊಳ್ಳಬೇಕಾಗಿರುವ ತಮ್ಮ ಮಕ್ಕಳ ಬಗ್ಗೆ ಪೋಷಕರು ಚಿಂತೆಗೀಡಾಗಿದ್ದು, ಈ ನಿಟ್ಟಿನಲ್ಲಿ ಮಕ್ಕಳ ಭವಿಷ್ಯ ರೂಪಿಸಲು ಇದೊಂದೇ ಮಾರ್ಗ ಎನ್ನುವ ಮೂಲಕ ತಮ್ಮ ಮಕ್ಕಳಿಗೆ ಯೋಗ್ಯ ವರನನ್ನು ಹುಡುಕುವುದರೊಂದಿಗೆ ಮದುವೆ ಮಾಡಿಕೊಟ್ಟಿದ್ದಾರೆ.
ತನ್ನ ತರಗತಿಯ 20 ಸಹಪಾಠಿಗಳಲ್ಲಿ 10ಕ್ಕೂ ಅಧಿಕ ಮಂದಿ ಈಗಾಗಲೆ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರೆ ಇನ್ನಿಬ್ಬರ ವಿವಾಹಕ್ಕೆ ನಿಶ್ಚಿತಾರ್ಥ ನಡೆದಿದೆ ಎಂದು ಪದವಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ‘ಶಕ್ತಿ’ಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾಳೆ. -ಚಂದ್ರಮೋಹನ್