ಶನಿವಾರಸಂತೆ, ಆ. 25: ಶನಿವಾರಸಂತೆ 1ನೇ ವಿಭಾಗದಲ್ಲಿ ಕರ್ನಾಟಕ ಸರಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಕೆಲವು ವರ್ಷಗಳ ಹಿಂದೆ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದ್ದು, ಸಾರ್ವಜನಿಕರು, ಉದ್ಯೋಗಸ್ಥರು ಈ ಕುಡಿಯುವ ನೀರನ್ನು ಉಪಯೋಗಿಸುತ್ತಾರೆ. ಈ ಘಟಕ ಗ್ರಾಮ ಪಂಚಾಯಿತಿ ಆಡಳಿತಕ್ಕೆ ಒಳಪಟ್ಟಿದೆ. ಸುಮಾರು 25 ದಿನಗಳಿಂದ ಈ ಘಟಕ ಕೆಟ್ಟು ಹೋಗಿದೆ.
ಶನಿವಾರಸಂತೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಘಟಕಕ್ಕೆ ಸುಮಾರು 100 ಮಂದಿ ಕಾರ್ಡುದಾರರಿದ್ದು, ಕಾರ್ಡ್ ತೋರಿಸಿದರೆ ಒಬ್ಬರಿಗೆ 1 ಕ್ಯಾನ್ (20 ಲೀಟರ್) ಕುಡಿಯುವ ನೀರು ದೊರೆಯುತ್ತದೆ. ಕುಡಿಯುವ ನೀರಿನ ಘಟಕ ಕೆಟ್ಟುಹೋಗಿರುವುದರಿಂದ ಗ್ರಾಹಕರು ಕುಡಿಯುವ ನೀರನ್ನು ಸರಬರಾಜು ಮಾಡುವ ಖಾಸಗಿಯವರಿಂದ, 20 ಲೀಟರ್ ಕ್ಯಾನ್ ನೀರಿಗೆ ರೂ. 40 ಕೊಟ್ಟು ಕುಡಿಯುವ ನೀರನ್ನು ಕೊಂಡುಕೊಳ್ಳಬೇಕಾಗಿದೆ. ಈ ಬಗ್ಗೆ ಶನಿವಾರಸಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ ಈ ಕುಡಿಯುವ ನೀರಿನ ಘಟಕದ ಇಂಜಿನಿಯರ್ಗೆ ದುರಸ್ತಿಪಡಿಸುವಂತೆ ದೂರವಾಣಿ ಕರೆ ಮಾಡಿ ತಿಳಿಸಿದರೂ ಪ್ರಯೋಜನವಾಗಿಲ್ಲ.