ಕರಿಕೆ, ಆ. 25: ಕೇಂದ್ರ ಸರಕಾರವು ದೇಶದ ಎಲ್ಲ ಗಡಿಪ್ರದೇಶಗಳಲ್ಲಿ ಅಂತರರಾಜ್ಯ ಪ್ರಯಾಣ-ಸರಕು ಸಾಗಣೆಯನ್ನು ನಿರ್ಬಂಧ ಮುಕ್ತಗೊಳಿಸಿ ಇತ್ತೀಚೆಗೆ ನೂತನ ಮಾರ್ಗಸೂಚಿ ಪ್ರಕಟಿಸಿದೆ. ಆದರೆ ಕರ್ನಾಟಕ-ಕೇರಳ ಗಡಿ ಪ್ರದೇಶವಾದ ಕೊಡಗಿನ ಕರಿಕೆಯಲ್ಲಿ ಮಾತ್ರ ನಿರ್ಬಂಧ ಮುಂದುವರೆದಿದೆ.ಕರ್ನಾಟಕದ ಪರವಾಗಿ ಕರಿಕೆ ಗ್ರಾಮ ಪಂಚಾಯಿತಿಯು ಕೇಂದ್ರ ಸರಕಾರದ ನಿರ್ದೇಶನಕ್ಕೆ ಮನ್ನಣೆ ನೀಡಿ ಗಡಿ ಸಂಚಾರವನ್ನು ಮುಕ್ತಗೊಳಿಸಿದರು ಸನಿಹದ ಪಾನತ್ತಡಿ ಗ್ರಾಮ ಪಂಚಾಯಿತಿಯು ಗಡಿ ನಿರ್ಬಂಧವನ್ನು ಮುಂದು ವರಿಸಿದೆ. ಕೇರಳದ ಕಾಸರಗೋಡು ಜಿಲ್ಲಾ ಪರಿವ್ಯಾಪ್ತಿಯ ಪಾನತ್ತಡಿ ಗ್ರಾಮ ಪಂಚಾಯಿತಿಯು ಈ ನಿರ್ಬಂಧವನ್ನು ಮುಂದುವರಿಸಿ ರುವುದರಿಂದ ಸನಿಹದ ಕೇರಳದ ಪಾಣತ್ತೂರು ಹಾಗೂ ಇತರೆಡೆ ತೆರಳಲು ಸಾಧ್ಯವಾಗದೆ ಕರಿಕೆ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುವಂತೆ ಆಗಿದೆ. ಇದೀಗ ಸೋಮವಾರದಿಂದ ಬೆಳಿಗ್ಗೆ ಒಂಬತ್ತರಿಂದ ಹನ್ನೊಂದು ಮೂವತ್ತರವರೆಗೆ ಹಾಗೂ ಸಂಜೆ ಮೂರರಿಂದ ನಾಲ್ಕರವರೆಗೆ ಮಾತ್ರ ಕೇರಳದ ಪಾಣತ್ತೂರಿಗೆ ತೆರಳಲು ಅವಕಾಶ ಕಲ್ಪಿಸಲು ಪಾನತ್ತಡಿ ಪಂಚಾಯತಿ ತೀರ್ಮಾನ ಕೈಗೊಂಡಿದೆ. ಈ ಆದೇಶವನ್ನು ಗಡಿಭಾಗವಾದ ಚೆಂಬೇರಿಯಲ್ಲಿ ಕಾರ್ಯಗತಗೊಳಿಸಿದ್ದು ಕೇಂದ್ರ ಸರಕಾರದ ಆದೇಶದ ವಿರುದ್ಧವಾಗಿದೆ. ರಾಜ್ಯ ಹಾಗೂ ಕೊಡಗಿನ ಗಡಿಗ್ರಾಮ ಕರಿಕೆಯ ಜನತೆ ಆಸ್ಪತ್ರೆ, ಶೈಕ್ಷಣಿಕ ಮತ್ತು ತಮ್ಮ ದೈನಂದಿನ ಚಟುವಟಿಕೆಗಳಿಗೆ ಕೇರಳ ಹಾಗೂ ಸುಳ್ಯವನ್ನು ಅವಲಂಬಿತರಾಗಿದ್ದು, ಅಡಚಣೆ ಹಿನ್ನೆಲೆಯಲ್ಲಿ ಪರದಾಡುವಂತಾಗಿದೆ. ಕೂಡಲೇ ಸರಕಾರ ಮಧ್ಯಪ್ರವೇಶಿಸಿ ಅಂತರ ರಾಜ್ಯದ
(ಮೊದಲ ಪುಟದಿಂದ) ಗಡಿ ರಸ್ತೆ ಸಂಚಾರ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಉಭಯ ರಾಜ್ಯದ ಜಿಲ್ಲಾಮಟ್ಟದ ಅಧಿಕಾರಿಗಳು ಚರ್ಚಿಸಿ ಪರಿಸ್ಥಿತಿಯನ್ನು ಇತ್ಯರ್ಥ ಪಡಿಸದಿದ್ದಲ್ಲಿ ಸಂಘರ್ಷಕ್ಕೆ ನಾಂದಿಯಾಗಲಿದೆ. ಸಮಸ್ಯೆ ಬಗೆಹರಿಯಲಿ ಎಂಬದೇ ಕರಿಕೆ ಗ್ರಾಮಸ್ಥರ ಆಶಯವಾಗಿದೆ.
-ಸುಧೀರ್ ಹೊದ್ದೆಟ್ಟಿ