ವೀರಾಜಪೇಟೆ, ಆ. 25: ಅಕ್ಷರದಾಸೋಹ ಶಾಲೆಗಳಲ್ಲಿ ದುಡಿಯುತ್ತಿರುವ ಬಿಸಿಊಟ ತಯಾರಿಸುವ ನೌಕರರಿಗೆ ಕಳೆದ ಐದು ತಿಂಗಳಿಂದ ಸರಕಾರ ಯಾವುದೇ ಸಂಭಾವನೆ ನೀಡದಿರುವ ಬಗ್ಗೆ ಅಕ್ಷರದಾಸೋಹ ಸಂಘದ ಸದಸ್ಯರುಗಳು ವೀರಾಜಪೇಟೆ ಮಿನಿವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಿದರು. ಸಂಭಾವನೆ ಹಾಗೂ ಒಟ್ಟು ಏಳು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದರಲ್ಲದೆ. ತಹಶೀಲ್ದಾರ್ ಎಲ್.ಎಂ. ನಂದೀಶ್ ಅವರಿಗೆ ಮನವಿ ಸಲ್ಲಿಸಿ ಸರಕಾರಕ್ಕೆ ಕಳಿಸುವಂತೆ ಆಗ್ರಹಿಸಿದರು.

ಪ್ರತಿಭಟನೆ ವೇಳೆ ಅಕ್ಷರ ದಾಸೋಹ ಸಂಘದ ಜಿಲ್ಲಾ ಅಧ್ಯಕ್ಷೆ ಕೆ.ಎ. ಪ್ರಮಿಳಾ ಮಾತನಾಡಿ, ಬಿಸಿಊಟ ನೌಕರರಿಗೆ ಕಳೆದ ಏಪ್ರಿಲ್ ತಿಂಗಳಿಂದ ಮುಂದಿನ ಶಾಲೆಗಳು ಪ್ರಾರಂಭವಾಗುವವರೆಗೂ ವೇತನ ಹಾಗೂ ಆರು ತಿಂಗಳಿಗೆ ಪಡಿತರ ಸಾಮಗ್ರಿಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ಸಿ.ಐ.ಟಿ.ಯು ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ.ಸಾಬು ಮಾತನಾಡಿದರು. ಪ್ರತಿಭಟನೆ ಹಾಗೂ ಮನವಿ ಸಲ್ಲಿಸುವ ಸಂದರ್ಭ ಅಕ್ಷರದಾಸೋಹ ಸಂಘದ ತಾಲೂಕು ಅಧ್ಯಕ್ಷೆ ನ್ಯಾನ್ಸಿ ಹಾಗೂ ಪದಾಧಿಕಾರಿಗಳು ಹಾಜರಿದ್ದರು.