ಸುಂಟಿಕೊಪ್ಪ,ಆ.25: ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ಸರಕಾರದಿಂದ ಅಧಿಕೃತ ಗುತ್ತಿಗೆ ಪಡೆದು ಕಾವೇರಿ ಮೀನುಗಾರಿಕ ಸಹಕಾರ ಸಂಘದಿಂದ ಮೀನು ಮರಿಗಳನ್ನು ಬಿಡಲಾಗಿದೆ. ಈ ಸ್ಥಳದಲ್ಲಿ ಅಕ್ರಮವಾಗಿ ಮೀನನ್ನು ಹಿಡಿದವರ ಮೇಲೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಸಂಘದ ಅಧ್ಯಕ್ಷ ಇ.ಎಸ್. ಶ್ರೀನಿವಾಸ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಾರಂಗಿ ಜಲಾಶಯದಿಂದ ಗರಗಂದೂರು ಹಾರ್‍ಬೈಲ್ ಪ್ರದೇಶದ ಹಿನ್ನೀರಿನಲ್ಲಿ ಲಕ್ಷಾಂತರ ರೂ ಮೌಲ್ಯದ ಮೀನು ಮರಿಗಳನ್ನು ಬಿಡಲಾಗಿದೆ. 2021 ಮಾರ್ಚ್ ತಿಂಗಳಿನವರೆಗೆ ಸರಕಾರದಿಂದ ಕಾವೇರಿ ಮೀನುಗಾರಿಕಾ ಸಹಕಾರ ಸಂಘ ಗುತ್ತಿಗೆ ಪಡೆದಿದೆ. ಕಳೆದ ವರ್ಷ ಬಲೆ ಹಾಗೂ ಹರಿಗೋಲು ಬಳಸಿ ಮೀನನ್ನು ಕಳ್ಳರು ಕದ್ದು ಹಿಡಿದು ಮಾರಾಟ ಮಾಡಿದ್ದಾರೆ. ಇದರಿಂದ ಸಂಘಕ್ಕೆ ಲಕ್ಷಾಂತರ ರೂ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಅಕ್ರಮವಾಗಿ ಮೀನನ್ನು ಹಿಡಿದರೆ ಪೊಲೀಸರ ಮೂಲಕ ದಾಳಿ ನಡೆಸಿ ಬಲೆ ಹಾಗೂ ಹರಿಗೋಲನ್ನು ಮುಟ್ಟುಗೋಲು ಹಾಕಿಕೊಂಡು ಮೊಕದ್ದಮೆ ದಾಖಲಿಸಲಾಗುವುದು ಎಂದೂ ಶ್ರೀನಿವಾಸ, ನಿರ್ದೇಶಕ ಕುಂಞಕೃಷ್ಣ, ಸದಸ್ಯರುಗಳಾದ ಕೆ.ಎಸ್ ಮಹಮ್ಮದ್, ಯಶೋಧ, ಮಲ್ಲಿಕಾ, ಈರಪ್ಪ ಹಾಗೂ ವಿಜಯನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.