ಮಡಿಕೇರಿ, ಆ. 25: ಅಳಿವಿನಂಚಿ ನಲ್ಲಿರುವ ಒಂದು ನಕ್ಷತ್ರ ಆಮೆ ಸಹಿತ ಮತ್ತೊಂದು ಅಪರೂಪದ ಆಮೆಯನ್ನು ಅಕ್ರಮವಾಗಿ ಹಿಡಿದು ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಮಡಿಕೇರಿ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಬಂಧಿಸಿದ್ದಾರೆ. ಬಂಧಿತನೊಂದಿಗೆ ಒಂದು ನಕ್ಷತ್ರ ಆಮೆ ಹಾಗೂ ಮತ್ತೊಂದು ಅಪರೂಪದ ಮಾದರಿಯ ಆಮೆಯನ್ನು ವಶಪಡಿಸಿಕೊಳ್ಳಲಾಗಿದೆ.
ವೀರಾಜಪೇಟೆ ತಾಲೂಕಿನ ಕೊಟ್ಟೋಳಿ ಬೋಯಿಕೇರಿಯ ಅಬ್ದುಲ್ ಹಮೀದ್ (33) ಎಂಬಾತ ಬಂಧಿತ ವ್ಯಕ್ತಿ. ಈ ಅಪರೂಪದ ಆಮೆಗಳನ್ನು ವಶದಲ್ಲಿ ಇಟ್ಟುಕೊಂಡಿದ್ದ ಆರೋಪಿ ಇವುಗಳನ್ನು ಭಾರೀ ಬೆಲೆಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ವೆನ್ನಲಾಗಿದೆ. ಈ ಮಾಹಿತಿ ಅರಿತ ಅರಣ್ಯ ಸಂಚಾರಿದಳದ ಸಿಬ್ಬಂದಿಗಳು ಖರೀದಿಯ ಸೋಗಿನಲ್ಲಿ ಕಾರ್ಯಾ ಚರಣೆ ನಡೆಸಿ ಆರೋಪಿಯನ್ನು ಎಂ. ಬಾಡಗದ ಬಸ್ ತಂಗುದಾಣದ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಕ್ಷತ್ರ ಆಮೆ ಇದ್ದರೆ ಅದೃಷ್ಟ ಖುಲಾಯಿಸಲಿದೆ ಎಂಬ ನಂಬಿಕೆ ಇದ್ದು ಇದಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಇದೆ ಎನ್ನಲಾಗುತ್ತದೆ.ಈ ನಕ್ಷತ್ರ ಆಮೆಯೊಂದಿಗೆ ಮತ್ತೊಂದು ಅಪರೂಪದ ರೀತಿಯ ಆಮೆಯೂ ಪತ್ತೆಯಾಗಿದ್ದು, ಇದನ್ನೂ ತಂಡ ವಶಕ್ಕೆ ಪಡೆದಿದೆ. ಆರೋಪಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರಂತೆ ಪ್ರಕರಣ ದಾಖಲಿಸ ಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪೊಲೀಸ್ ಅರಣ್ಯ ಸಂಚಾರಿ ದಳದ ಅಧೀಕ್ಷಕ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಮಡಿಕೇರಿ ಅರಣ್ಯ ಸಂಚಾರಿ ದಳದ ಎಸ್ಐ ಚಳಿಯಂಡ ಯು. ಸವಿ, ಸಿಬ್ಬಂದಿಗಳಾದ ಸುಬ್ರಮಣ್ಯ, ರಾಜೇಶ್, ರಾಘವೇಂದ್ರ, ಯೋಗೇಶ್, ಮೋಹನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.