ಕಣಿವೆ, ಆ. 25: ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಾರೆ ಗ್ರಾಮದ ಬಸವೇಶ್ವರ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ವ್ಯಕ್ತಿಯೊಬ್ಬರು ಅತಿಕ್ರಮಿಸಿ ಬೇಲಿ ಹಾಕಿದ್ದಾರೆ. ಕೂಡಲೇ ಬೇಲಿಯನ್ನು ತೆರವುಗೊಳಿಸಿ ನಮಗೆ ಸುಸಜ್ಜಿತ ರಸ್ತೆ ನಿರ್ಮಿಸಿಕೊಡಬೇಕೆಂದು ಬಸವನಾರೆ ಗ್ರಾಮದ ಪ್ರಮುಖರು ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಬಸವನಹಳ್ಳಿಯಲ್ಲಿ ಮನವಿ ಪತ್ರ ನೀಡಿದರು. ಗ್ರಾಮದ ಬಸವೇಶ್ವರ ದೇವಾಲಯಕ್ಕೆ ಇರುವ ರಸ್ತೆಗೆ 150 ವರ್ಷಗಳ ಇತಿಹಾಸವಿದೆ. ಆದರೆ ಮಲ್ಲಿಪಟ್ಟಣದಲ್ಲಿ ವಾಸವಿರುವ ಗ್ರಾಮದ ನಿವಾಸಿ ಸುಬ್ಬೇಗೌಡ ಎಂಬವರು ಒತ್ತುವರಿ ಮಾಡಿರುವುದರಿಂದ ಗ್ರಾಮಸ್ಥರ ಸಂಚಾರಕ್ಕೆ ತೊಂದರೆಯಾಗಿದೆ. ಅಲ್ಲದೇ ಇದೇ ರಸ್ತೆಯ ಮೂಲಕ ಗ್ರಾಮಸ್ಥರು ಅವರ ಹಕ್ಕಿನ ಜಮೀನುಗಳಿಗೆ ಹೋಗಲು ಕೂಡ ಆಗುತ್ತಿಲ್ಲ. ಕೂಡಲೇ ತಾವುಗಳು ಸ್ಥಳ ಪರಿಶೀಲಿಸಿ ಆಗಿರುವ ಅನಾನುಕೂಲ ತಪ್ಪಿಸಬೇಕು ಎಂದು ಗ್ರಾಮದ ಮುಖಂಡರಾದ ಮಹೇಶ್, ರಾಜಣ್ಣ, ನಿಂಗಪ್ಪ, ಮೋಹನ್, ಪ್ರಭಾಕರ್ ಮೊದಲಾದವರು ಶಾಸಕರಲ್ಲಿ ಮನವಿ ಪತ್ರ ನೀಡಿ ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಶಾಸಕ ರಂಜನ್, ಈ ಸಂಬಂಧ ತಹಶೀಲ್ದಾರ್ ಅವರಿಗೆ ಸೂಕ್ತ ನಿರ್ದೇಶನ ನೀಡಿ ಸ್ಥಳ ಪರಿಶೀಲಿಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು. ತಾಲೂಕು ಬಿಜೆಪಿ ಪರಿಶಿಷ್ಟ ವಿಭಾಗದ ಅಧ್ಯಕ್ಷ ಪ್ರಭಾಕರ್ ಪ್ರತಿಕ್ರಿಯಿಸಿ, ಈ ಬಗ್ಗೆ ತಹಶೀಲ್ದಾರ್ ಅವರಿಗೂ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದರು.