ಚೀನಾ ಗಡಿಯಲ್ಲಿ ಭಾರತ ಕಣ್ಗಾವಲು ಹೆಚ್ಚಳ
ನವದೆಹಲಿ, ಆ. 25: ಎಲ್ಎಸಿಯಲ್ಲಿ ಚೀನಾ ಹೆಲಿಕಾಫ್ಟರ್ಗಳ ಕಾರ್ಯನಿರ್ವಹಣೆಯ ಹಿನ್ನೆಲೆ ಭಾರತ ಈಶಾನ್ಯ ಲಡಾಖ್ನ ನಿರ್ಣಾಯಕ ಪ್ರದೇಶಗಳಲ್ಲಿ ಶೋಲ್ಡರ್ ಫೈರ್ಡ್ ಏರ್ ಡಿಫೆನ್ಸ್ ಮಿಸೈಲ್ಸ್ನ್ನು ನಿಯೋಜಿಸಿದೆ. ರಷ್ಯಾ ಮೂಲದ ಇಗ್ಲಾ ಏರ್ ಡಿಫೆನ್ಸ್ ಸಿಸ್ಟಮ್ ಸಹಿತವಾಗಿ ಭಾರತೀಯ ಸಿಬ್ಬಂದಿಗಳನ್ನು ನಿರ್ಣಾಯಕ ಪ್ರದೇಶಗಳಲ್ಲಿ ನಿಯೋಜನೆ ಮಾಡಲಾಗಿದ್ದು, ವಾಯು ಗಡಿಯನ್ನು ಉಲ್ಲಂಘಿಸಿ ಬರುವ ಶತ್ರು ರಾಷ್ಟ್ರದ ಸೇನಾ ಹೆಲಿಕಾಫ್ಟರ್ಗಳ ಬಗ್ಗೆ ನಿಗಾವಹಿಸಲಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಭಾರತೀಯ ಸೇನೆ ಹಾಗೂ ವಾಯುಪಡೆ ಎರಡೂ ರಷ್ಯಾ ಮೂಲಕದ ವಾಯು ರಕ್ಷಣಾ ವ್ಯವಸ್ಥೆಗಳನ್ನು ಬಳಕೆ ಮಾಡುತ್ತಿದ್ದು, ಯುದ್ಧ ಸನ್ನಿವೇಶದಲ್ಲಿ ಸಾಮಾನ್ಯವಾಗಿ ಬಳಕೆಯಾಗುತ್ತವೆ. ಎಲ್ಎಸಿ ಬಳಿ ತನ್ನ ಕಣ್ಗಾವಲನ್ನೂ ಹೆಚ್ಚಿಸಿಕೊಂಡಿರುವ ಭಾರತ, ಶತ್ರುಗಳ ಚಲನವಲನಗಳ ಬಗ್ಗೆ ನಿಗಾವಿಡಲು ಭೂಮಿಯ ಮೇಲ್ಮೈಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಗಳು ಹಾಗೂ ರಡಾರ್ಗಳ ನಿಯೋಜನೆಯಲ್ಲಿ ತೊಡಗಿದೆ.
ಹೊರ ರಾಜ್ಯಗಳಿಗೆ ಬಸ್ ಸಂಚಾರ
ಬೆಂಗಳೂರು, ಆ. 25: ದೇಶಾದ್ಯಂತ ಲಾಕ್ಡೌನ್ ಸಡಿಲಗೊಂಡಿರುವುದರಿಂದ ಹೊರ ರಾಜ್ಯಗಳಿಗೆ ಬಸ್ ಸಂಚಾರ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. ಇತರೆ ರಾಜ್ಯಗಳಿಗೆ ಅದರಲ್ಲೂ ಮುಖ್ಯವಾಗಿ ಗೋವಾ, ಕೇರಳ, ತಮಿಳುನಾಡು, ಪಾಂಡಿಚೇರಿ, ತೆಲಂಗಾಣ ರಾಜ್ಯಗಳಿಗೆ ಪುನಃ ಬಸ್ ಸಂಚಾರ ಪ್ರಾರಂಭಿಸಲಾಗುವುದು ಎಂದು ಲಕ್ಷ್ಮಣ ಸವದಿ ತಿಳಿಸಿದ್ದಾರೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಗಳು ಬಸ್ ಸಂಚಾರಕ್ಕೆ ಸಜ್ಜಾಗಿವೆ. ಆದರೆ ಪಕ್ಕದ ಈ ಎಲ್ಲಾ ರಾಜ್ಯಗಳಿಂದ ಇದಕ್ಕೆ ಹಸಿರು ನಿಶಾನೆ ದೊರೆಯಬೇಕಿದೆ. ನಂತರ ಸಾರ್ವಜನಿಕರ ಹಿತದೃಷ್ಟಿಯಿಂದ ಬಸ್ ಸಂಚಾರ ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ. ಪರಿಸ್ಥಿತಿ ಸುಧಾರಣೆಗೊಂಡ ನಂತರ ಮೊದಲ ಹಂತದಲ್ಲಿ ರಾಜ್ಯದಿಂದ ಆಂಧ್ರ ಪ್ರದೇಶಕ್ಕೆ ಸರ್ಕಾರಿ ಸಾರಿಗೆ ಬಸ್ ಸಂಚಾರ ಪ್ರಾರಂಭಿಸಲಾಗಿದೆ. ಸಾರ್ವಜನಿಕರ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಗೋವಾ, ಕೇರಳ, ತಮಿಳುನಾಡು, ಪಾಂಡಿಚೇರಿ, ತೆಲಂಗಾಣ ರಾಜ್ಯಗಳಿಗೆ ಬಸ್ ಸಂಚಾರ ಪ್ರಾರಂಭಿಸುವ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸುವಂತೆ ಕೋರಿ ನಮ್ಮ ಸಾರಿಗೆ ಇಲಾಖೆಯಿಂದ ಪತ್ರ ಬರೆಯಲಾಗಿದೆ ಎಂದಿದ್ದಾರೆ.
ಹೈ ಫೆÇ್ಲೀ ಆಕ್ಸಿಜನ್ ಉಪಕರಣ ಸಮರ್ಪಣೆ
ಬೆಳಗಾವಿ, ಆ. 25: ಕೋವಿಡ್-19 ಸೋಂಕಿತರಿಗೆ ವೆಂಟಿಲೇಟರ್ ಬದಲಾಗಿ ಸುಲಭ ಚಿಕಿತ್ಸೆ ನೀಡಬಹುದಾದ ನಾಲ್ಕು ಹೈ ಫೆÇ್ಲೀ ನೇಸಲ್ ಕೆನೂಲಾ ಆಕ್ಸಿಜನ್ ಉಪಕರಣಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಬಿಮ್ಸ್ ಆಸ್ಪತ್ರೆಗೆ ಸಮರ್ಪಿಸಿದರು. ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ್ ಪಾಟೀಲರು ಕೊಡಮಾಡಿದ ಈ ಉಪಕರಣಗಳನ್ನು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ನಡೆದ ಜನಪ್ರತಿನಿಧಿಗಳ ಸಭೆಯ ಬಳಿಕ ಈ ಉಪಕರಣಗಳನ್ನು ಮುಖ್ಯಮಂತ್ರಿಗಳು ಆಸ್ಪತ್ರೆಗೆ ನೀಡಿದರು. ರಾಜ್ಯದಲ್ಲಿ ಮೊದಲ ಬಾರಿ ಶಾಸಕ ಪಾಟೀಲ ಅವರು ನೀಡಿದ್ದಾರೆ. ಇದೇ ರೀತಿ ಉಳಿದ ಕ್ಷೇತ್ರದ ಶಾಸಕರೂ ಈ ರೀತಿಯ ಹೈ ಫೆÇ್ಲೀ ನೇಸಲ್ ಕೆನೂಲಾ ಆಕ್ಸಿಜನ್ ಉಪಕರಣಗಳನ್ನು ನೀಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಲಹೆ ನೀಡಿದರು. ಇದಕ್ಕೆ ಸಂಬಂಧಿಸಿದಂತೆ ಸರ್ಕಾರದ ವತಿಯಿಂದ ಸುತ್ತೋಲೆ ಕೂಡ ಹೊರಡಿಸಲಾಗುತ್ತದೆ ಎಂದರು.
ಪುಲ್ವಾಮಾ ದಾಳಿಯ ಚಾರ್ಜ್ ಶೀಟ್ ಸಲ್ಲಿಕೆ
ನವದೆಹಲಿ, ಆ. 25: 2019ರ ಫೆಬ್ರವರಿ 14 ರಂದು ನಡೆದಿದ್ದ ಪುಲ್ವಾಮಾ ಉಗ್ರ ದಾಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಚಾರ್ಜ್ ಶೀಟ್ ಸಲ್ಲಿಸಿದ್ದು ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಮತ್ತು ಆತನ ಸಹೋದರ ಅಬ್ದುಲ್ ಅಸ್ಗರ್ ದಾಳಿಯ ಮಾಸ್ಟರ್ ಮೈಂಡ್ ಎಂದು ಹೇಳಿದೆ. ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ಎನ್ಐಎ 5000 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ. ಇನ್ನು ಮಾಸ್ಟರ್ ಮೈಂಡ್ ಸೇರಿದಂತೆ ಉಗ್ರ ಮೊಹಮ್ಮದ್ ಉಮರ್ ಫಾರೂಕ್, ಆತ್ಮಾಹುತಿ ಬಾಂಬರ್ ಅದಿಲ್ ಅಹ್ಮದ್ ದಾರ್ ಮತ್ತು ಇತರರ ಹೆಸರನ್ನು ನಮೂದಿಸಿದೆ. ಇದೇ ವೇಳೆ ಜಮ್ಮುವಿನಲ್ಲಿ ಬಂಧಿಸಲಾಗಿದ್ದು ಆರೋಪಿಗಳಾದ ಅಜಾರ್, ಅಗ್ಸರ್ ಮತ್ತು ಫಾರೂಕಿ ಹೆಸರನ್ನು ನಮೂದಿಸಿದೆ. 2019ರ ಫೆಬ್ರವರಿ 14ರಂದು ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಆತ್ಮಾಹುತಿ ಬಾಂಬರ್ ಸಿಆರ್ಪಿಎಫ್ ವಾಹನಕ್ಕೆ ಡಿಕ್ಕಿ ಹೊಡೆದು ಸ್ಫೋಟಿಸಿದ್ದು ಈ ದಾಳಿಯಲ್ಲಿ 40ಕ್ಕೂ ಹೆಚ್ಚು ಭಾರತೀಯ ಯೋಧರು ಹುತಾತ್ಮರಾಗಿದ್ದರು.
ಮಾಜಿ ಐಪಿಎಸ್ ಅಣ್ಣಾಮಲೈ ಬಿಜೆಪಿಗೆ ಸೇರ್ಪಡೆ
ನವದೆಹಲಿ, ಆ. 25: ಕರ್ನಾಟಕದ ಸಿಂಗಂ ಎಂದೇ ಹೆಸರಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಕುಪ್ಪುಸ್ವಾಮಿ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ. ಮುರುಳಿಧರ್ ರಾವ್, ತಮಿಳುನಾಡು ಬಿಜೆಪಿ ಅಧ್ಯಕ್ಷ ಎಲ್. ಮುರುಗನ್ ಸಮ್ಮುಖದಲ್ಲಿ ಅಣ್ಣಾಮಲೈ ಬಿಜೆಪಿ ಸೇರ್ಪಡೆಗೊಂಡರು. ತಮಿಳುನಾಡಿನ ಅಣ್ಣಾಮಲೈ 10 ವರ್ಷಗಳ ಕಾಲ ಕರ್ನಾಟಕದಲ್ಲಿ ಸೇವೆ ಸಲ್ಲಿಸಿ, 2019ರಲ್ಲಿ ಸೇವೆಗೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ನೀಡಿದ ಒಂದು ವರ್ಷದ ನಂತರ ಫೇಸ್ಬುಕ್ ಲೈವ್ನಲ್ಲಿ ತಮಿಳುನಾಡು ರಾಜಕೀಯ ಪ್ರವೇಶಿಸಲಿದ್ದು, 2021ರ ರಾಜ್ಯ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸುವುದಾಗಿ ಹೇಳಿಕೊಂಡಿದ್ದರು.
ರೂ. 2 ಸಾವಿರ ನೋಟು ಮುದ್ರಿಸಿಲ್ಲ
ಮುಂಬೈ, ಆ. 25: 2019-20ರಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಮುದ್ರಿಸಲಾಗಿಲ್ಲ ಮತ್ತು ಈ ವರ್ಷ 2000 ನೋಟುಗಳ ಚಲಾವಣೆ ಕಡಿಮೆಯಾಗಿದೆ ಎಂದು ಆರ್ಬಿಐನ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ. ಚಲಾವಣೆಯಲ್ಲಿರುವ ರೂ. 2 ಸಾವಿರ ಕರೆನ್ಸಿ ನೋಟುಗಳ ಸಂಖ್ಯೆ 2018 ರ ಮಾರ್ಚ್ ಅಂತ್ಯದ ವೇಳೆಗೆ 33,632 ಲಕ್ಷ ಇತ್ತು. ಅದು 2019 ರ ಮಾರ್ಚ್ ಅಂತ್ಯದ ವೇಳೆಗೆ 32,910 ಲಕ್ಷ ನೋಟ್ಗಳಿಗೆ ಇಳಿಕೆಯಾಗಿದೆ ಮತ್ತು 2020ರ ಮಾರ್ಚ್ ಅಂತ್ಯದ ವೇಳೆಗೆ 27,398 ಲಕ್ಷ ನೋಟ್ಗಳಿಗೆ ಇಳಿದಿದೆ ಎಂದು ಆರ್ಬಿಐ ವಾರ್ಷಿಕ ವರದಿ ವಿವರಿಸಿದೆ. 2020ರ ಮಾರ್ಚ್ ಅಂತ್ಯದ ವೇಳೆಗೆ ಒಟ್ಟು ನೋಟುಗಳ ಪ್ರಮಾಣ ಶೇ. 2.4, 2019 ರ ಮಾರ್ಚ್ ಅಂತ್ಯದ ವೇಳೆಗೆ ಶೇ. 3 ಮತ್ತು 2018 ರ ಮಾರ್ಚ್ ಅಂತ್ಯದ ವೇಳೆಗೆ 3.3 ರಷ್ಟಿದೆ. ಮತ್ತೊಂದೆಡೆ, 2018 ರಿಂದ ಚಲಾವಣೆಗೆ ಬಂದ 500 ಹಾಗೂ 200 ರೂಪಾಯಿ ನೋಟ್ಗಳ ಪ್ರಮಾಣ ಮತ್ತು ಚಲಾವಣೆ ಕಳೆದ ಮೂರು ವರ್ಷಗಳಲ್ಲಿ ಗಣನೀಯವಾಗಿ ಏರಿದೆ ಎಂದು ವರದಿ ತಿಳಿಸಿದೆ.
ವೈಷ್ಣೋದೇವಿ ಯಾತ್ರೆಗೆ ಬುಕ್ಕಿಂಗ್ ಆರಂಭ
ಜಮ್ಮು, ಆ. 25: ಶ್ರೀ ಮಾತಾ ವೈಷ್ಣೋದೇವಿ ಯಾತ್ರಿಕರ ಆನ್ಲೈನ್ ಯಾತ್ರೆಗೆ ನೋಂದಣಿ ಮತ್ತು ಹೆಲಿಕಾಪ್ಟರ್ ಬುಕ್ಕಿಂಗ್ ಬುಧವಾರದಿಂದ ಆರಂಭವಾಗಲಿದೆ. ತಾ. 26 ರಿಂದ ಸೆ. 5 ರವರೆಗೆ ವೈಷ್ಣೋದೇವಿ ಆನ್ಲೈನ್ ಯಾತ್ರೆಗೆ ನೋಂದಣಿ ಮತ್ತು ಹೆಲಿಕಾಪ್ಟರ್ ಬುಕ್ಕಿಂಗ್ ಲಭ್ಯವಿರಲಿದೆ ಎಂದು ಶ್ರೀ ಮಾತಾ ವೈಷ್ಣೋದೇವಿ ದೇಗುಲ ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಕುಮಾರ್ ತಿಳಿಸಿದ್ದಾರೆ. ಇದು ನಿರಂತರ ಪ್ರಕ್ರಿಯೆಯಾಗಲಿದೆ. ಯಾತ್ರಿಕರು ಆನ್ಲೈನ್ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಕತ್ರಾ ತಲುಪುವ ಮುನ್ನ ಹೆಲಿಕಾಪ್ಟರ್ ಟಿಕೆಟ್ಗಳನ್ನು ಮುಂಚಿತವಾಗಿ ಕಾಯ್ದಿರಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ. ಈ ಮಧ್ಯೆ, ಅಧಿಕೃತ ಮಾಹಿತಿಯಂತೆ, ಇತರ ರಾಜ್ಯಗಳಿಂದ ಬರುವ ಯಾತ್ರಿಕರ ಕೋಟಾವನ್ನು ದಿನಕ್ಕೆ 100 ರಿಂದ 250ಕ್ಕೆ ಹೆಚ್ಚಿಸಲಾಗಿದೆ.