ಸಿದ್ದಾಪುರ ಆ.25 : ಅಭ್ಯತ್ ಮಂಗಲ, ಒಂಟಿಯಂಗಡಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಅಂಚೆಮನೆ ಸುಧಾಕರ್ ಎಂಬವರ ನಾಟಿ ಕಾರ್ಯ ಮುಗಿಸಿದ ಭತ್ತದ ಗದ್ದೆಯನ್ನು ಸಂಪೂರ್ಣವಾಗಿ ನಾಶ ಮಾಡಿದೆ. ತೋಟಕ್ಕೂ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು 60ಕ್ಕೂ ಅಧಿಕ ಅಡಿಕೆ ಮರಗಳನ್ನು ಬೀಳಿಸಿವೆ. ಕಾಫಿ ಗಿಡಗಳನ್ನು ಕೂಡ ತುಳಿದು ಹಾಳು ಮಾಡಿದೆ. ನಿತ್ಯ ಕಾಡಾನೆಗಳ ಹಾವಳಿಯಿಂದ ಬೇಸತ್ತಿರುವ ಸುಧಾಕರ್ ಅವರು ಕಷ್ಟಪಟ್ಟು ಬೆಳೆಸಿದ ಗಿಡಗಳು ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಕಾಡೆಮ್ಮೆಗಳÀ ಕಾಟ : ಅತ್ತಿಮಂಗಲ ಕೆರೆ ಸಮೀಪ ನೀಲಗಿರಿ ತೋಟದಲ್ಲಿ ಸುಮಾರು 30 ಕಾಡಾನೆಗಳು ಬೀಡು ಬಿಟ್ಟಿದ್ದು, ಇವುಗಳೊಂದಿಗೆ ಮೂರು ಕಾಡೆಮ್ಮೆಗಳು ಕೂಡ ಕಾಣಿಸಿಕೊಂಡಿವೆ. (ಮೊದಲ ಪುಟದಿಂದ) ಇಲ್ಲಿಯೂ ತೋಟಗಳಿಗೆ ಸಾಕಷ್ಟು ಹಾನಿಯಾಗಿದ್ದು, ಗ್ರಾಮಸ್ಥರು ವನ್ಯಜೀವಿಗಳ ಉಪಟಳದಿಂದ ಆತಂಕಕ್ಕೆ ಒಳಗಾಗಿದ್ದಾರೆ. ಅಭ್ಯತ್ ಮಂಗಲದ ಚೆಟ್ಟಿಮೂಲೆ ಎಂಬಲ್ಲಿ ಬೆಳೆಗಾರರೊಬ್ಬರು ಸೋಲಾರ್ ಬೇಲಿ ಹಾಕಿರುವುದರಿಂದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ವಿಫಲವಾಗುತ್ತಿದೆ. ಬೇಲಿ ಅಡ್ಡಿಯಾಗಿರುವುದರಿಂದ ಆನೆಗಳು ಅರಣ್ಯದ ಕಡೆ ಮುಖ ಮಾಡುತ್ತಿಲ್ಲವೆಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ. ಬೇಲಿಯನ್ನು ತೆಗೆದು ಕಾರ್ಯಾಚರಣೆ ನಂತರ ಹಾಕಿಕೊಳ್ಳುವಂತೆ ತೋಟದ ಮಾಲೀಕರಲ್ಲಿ ಮನವಿ ಮಾಡಿದರೂ ಒಪ್ಪುತ್ತಿಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.